Saturday, April 4, 2015

'ಜನ್‍ಧನಾ'ಧನ್ - Analysis of PMJDY Pradhan Mantri Jan Dhan Yojana the largest scheme for Financial inclusion

'ಜನ್‍ಧನಾ'ಧನ್.


ಮೋದಿ ನೇತೃತ್ವದ ಕೇಂದ್ರ ಸರಕಾರ ಒಂದು ವರ್ಷ ಪೂರೈಸುವುದರಲ್ಲಿದೆ. ಈ ಹಂತದಲ್ಲಿ ಗ್ರಾಮೀಣ ನಾಗರಿಕರಿಗೆ,ಬಡವರಿಗೆ ನೇರವಾಗಿ ಪರಿಣಾಮ ಬೀರುವ ಸರಕಾರದ 'ಪೈಲೆಟ್' ಯೋಜನೆಯೊಂದರ ಸಮೀಕ್ಷೆ. ಐ.ಎಂ.ಎಫ್ ಮುಖ್ಯಸ್ಥೆ ಕ್ರಿಶ್ಚಿಯನ್ ಲಿಗಾರ್ಡೆ ಮೊದಲಾಗಿ ಎಲ್ಲರೂ ಈ ಯೋಜನೆಯನ್ನು ಹೊಗಳುವವರೇ. "ಜಾಮ್"(ಜನ್ ಧನ್-ಆಧಾರ್-ಮೊಬೈಲ್ ಫೋನ್ ಟ್ರಿನಿಟಿ) JAM=Jan Dhan Aadhar Mobile Trinity for the effective delivery.  ಇದು ಮೋದಿಯವರ ಆರ್ಥಿಕ ನೀತಿಯ ಮೂಲ ಸ್ಥಂಭ. ಇದೇ ಜನರಿಗೆ ನೇರವಾಗಿ ಹಣಕಾಸಿನ ಸೇವೆಗಳನ್ನು ತಲುಪಿಸುವ ಆಧುನಿಕ ಕ್ರಮ.


ಈ ದೇಶಕ್ಕೆ "ಜನ್ ಧನಾ ಧನ್" ಯೋಜನೆಯ ಅನಿವಾರ್ಯತೆ, ಈ ಯೋಜನೆಯ ಕೂಲಂಕುಶ ಪರಿಚಯ,ಸಾಧ್ಯತೆ,ಸವಾಲುಗಳು, ವಿತ್ತೀಯ ಒಳಗೊಳ್ಳುವಿಕೆಯ ಹಾದಿಯಲ್ಲಿ ಭಾರತ ನಡೆದು ಬಂದ ಹಾದಿ- ಇತ್ಯಾದಿ ಸಂಗತಿಗಳನ್ನು ಸಮಗ್ರೀಕರಿಸುವ ಪ್ರಯತ್ನ ಇಲ್ಲಿದೆ...

--ಶ್ರೇಯಾಂಕ ಎಸ್ ರಾನಡೆ. 2011ರ ಜನಗಣತಿಯ ಪ್ರಕಾರ ಭಾರತದ 58.7% ಕುಟುಂಬಸ್ಥರಿಗೆ ಮಾತ್ರ ಬ್ಯಾಂಕಿಂಗ್ ಸೇವೆಗಳು ಮುಕ್ತವಾಗಿವೆ. 2012ರ ವಿಶ್ವ ಬ್ಯಾಂಕ್ ಫೈಂಡೆಕ್ಸ್ ಸಮೀಕ್ಷೆಯ ಪ್ರಕಾರ ಭಾರತದ 35% ವಯಸ್ಕರು ಮಾತ್ರ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆಗಸ್ಟ್ 2014ರ ಹೊತ್ತಿಗೆ ದೇಶದಲ್ಲಿ ಒಟ್ಟಾರೆ 1,15,082 ಬ್ಯಾಂಕ್ ಶಾಖೆಗಳಿದ್ದವು ಮತ್ತು 1,60,055 ಎ.ಟಿ.ಎಂ.ಗಳಿದ್ದವು. ಅವುಗಳಲ್ಲಿ 43,962 ಬ್ಯಾಂಕ್ ಶಾಖೆಗಳು ಅಂದರೆ ಕೇವಲ 38.2% ಮತ್ತು 23,334 ಎ.ಟಿ.ಎಂ.ಗಳು ಅಂದರೆ ಕೇವಲ 14.58% ಭಾರತದ ಗ್ರಾಮೀಣ ಪ್ರದೇಶದಲ್ಲಿವೆ. ಎಲ್ಲಾ ವ್ಯಾವಹಾರಿಕ ಬ್ಯಾಂಕ್‍ಗಳಿಂದ ಕೇವಲ 10%ಕ್ಕಿಂತಲೂ ಕಡಿಮೆ ಕ್ರೆಡಿಟ್ ಗ್ರಾಮೀಣ ಪ್ರದೇಶಗಳಿಗೆ ಹೋಗುತ್ತದೆ. ಯೋಚಿಸಿ ನೋಡಿ, ಈ ದೇಶದ 70% ಜನಸಂಖ್ಯೆ ವಾಸಿಸುತ್ತಿರುವುದು ಹಳ್ಳಿಗಳಲ್ಲಿ ಆದರೆ ಎಲ್ಲಾ ಲಾಭದಾಯಕ ಬ್ಯಾಂಕ್‍ಗಳ 90%ಗಿಂತಲೂ ಅಧಿಕ ಕ್ರೆಡಿಟ್ ಹೋಗುತ್ತಿರುವುದು ಕೇವಲ 30% ಜನಸಂಖ್ಯೆಗೆ ಅಂದರೆ ನಗರಗಳಿಗೆ ಮಾತ್ರ.! ಮಾರ್ಚ್ 2014ರ ಭಾರತೀಯ ರಿಸರ್ವ್ ಬ್ಯಾಂಕ್ ದಾಖಲೆಯ ಪ್ರಕಾರ ನಮ್ಮ ದೇಶದ 640,867 ಹಳ್ಳಿಗಳಲ್ಲಿ ಬ್ಯಾಂಕ್‍ಗಳಿರುವುದು ಕೇವಲ 46,126 ಹಳ್ಳಿಗಳಲ್ಲಿ ಮಾತ್ರ.!! ಅಚ್ಚರಿಯ ಸಂಗತಿಯೆನ್ನುವುದಕ್ಕಿಂತ ನೋವಿನ, ವಿಚಾರಣೀಯ ಸಂಗತಿ. ಇದು 28 ಆಗಸ್ಟ್ 2014ಕ್ಕಿಂತ ಮೊದಲು ಅಂದರೆ 'ಪ್ರಧಾನಮಂತ್ರಿ ಜನಧನ ಯೋಜನೆ' ಕಾರ್ಯರೂಪಕ್ಕೆ ಬರುವ ಪೂರ್ವದಲ್ಲಿದ್ದ, ಜೀವನದಲ್ಲಿ ಬ್ಯಾಂಕ್ ಖಾತೆಯನ್ನೇ ಹೊಂದಿರದಿದ್ದವರ, ಜೀವಮಾನದಲ್ಲೇ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಪಾಲ್ಗೊಳ್ಳದ ಭಾರತದ ಚಿತ್ರಣ. ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಮತ್ತೊಂದು ಮುಖ, ಗ್ರಾಮೀಣ ಭಾರತದಲ್ಲಿ ಸಿಗುತ್ತಿರುವ ವಿತ್ತೀಯ ಸೇವೆಗಳ ಕಟು ಸತ್ಯ.
ಮೇಲಿನ ಅಂಕಿಅಂಶಗಳನ್ನು ಓದಿದ ನಂತರ 'ಪ್ರಧಾನಮಂತ್ರಿ ಜನ ಧನ ಯೋಜನೆ'ಯ ಅನಿವಾರ್ಯತೆ ಮತ್ತು ತುರ್ತು ಏನು ಎಂಬುದನ್ನು ವಿವರಿಸಬೇಕಿಲ್ಲ. ಎಲ್ಲಾ ಜನರನ್ನು ದೇಶದ ಪ್ರಧಾನ ವಿತ್ತೀಯ ಧಾರೆಯಲ್ಲಿ ಒಳಗೊಳ್ಳುವಂತೆ, ಪಾಲ್ಗೊಳ್ಳುವಂತೆ ಮಾಡುವಲ್ಲಿ ಈ ಯೋಜನೆಯ ಕಾರ್ಯ ಶ್ಲಾಘನೀಯ ಈ ಯೋಜನೆಯು ಪ್ರಧಾನಿಯವರ ಕನಸಿನ ಕೂಸು ಎನ್ನುವ ಜೊತೆಗೆ ಇದಕ್ಕೆ ಸಿಕ್ಕ ಮನ್ನಣೆ, ಜನಪ್ರಿಯತೆಯಿಂದ ಸ್ವಂತಂತ್ರ ಭಾರತದಲ್ಲಿ ಬ್ಯಾಂಕಿಂಗ್ ಕ್ರಾಂತಿಗೆ ನಾಂದಿಹಾಡಿದರೆ ಅಚ್ಚರಿಪಡಬೇಕಿಲ್ಲ. ಪ್ರಧಾನಿಯೇ ಮುಂದೆ ಬಂದು ನಿರ್ಲಕ್ಷ್ಯಕ್ಕೊಳಗಾಗಿದ್ದ ಬ್ಯಾಂಕ್ ಖಾತೆಯ ಅಗತ್ಯತೆಯನ್ನು ಮನದಟ್ಟು ಮಾಡಿಸಿ, ಎಲ್ಲರಿಗಾಗಿ ಬ್ಯಾಂಕಿಂಗ್ ಆಗಬೇಕಿರುವುದನ್ನು ಮನಗಂಡು ಬ್ಯಾಂಕ್‍ಗಳನ್ನೇ ಜನರತ್ತ ಹೋಗುವಂತೆ ಮಾಡಿದ್ದಾರೆ.
26ಜನವರಿ2015ರ ಹೊತ್ತಿಗೆ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಈ ವರೆಗೂ ಪಾಲ್ಗೊಳ್ಳದ ಅಂದರೆ ನೇರವಾಗಿ ವಿತ್ತೀಯ ಸೇವೆಗಳಿಂದ ವಂಚಿತರಾಗಿದ್ದ, ಬಡ, ಶಿಕ್ಷಣ ವಂಚಿತ, ದುರ್ಬಲ ಜನರಿಂದ,ಜನರಿಗಾಗಿ 7.5ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಗುರಿ ಹೊಂದಿತ್ತು. ಈಗ 14.14ಕೋಟಿ ಬ್ಯಾಂಕ್ ಖಾತೆಗಳು ನೋಂದಣಿಗೊಳ್ಳುವ ಮೂಲಕ ಈ ಯೋಜನೆ ವಿಶ್ವದಾಖಲೆಯನ್ನೇ ಬರೆದಿದೆ. ಯೋಜನೆ ಪ್ರಾರಂಭಿಸಿದ ಮೊದಲ ವಾರದಲ್ಲೇ (ಅಂದರೆ 23-28ಆಗಸ್ಟ್2014) 18,096,130 ಖಾತೆಗಳನ್ನು ತೆರೆಯುವ ಮೂಲಕ ಅನೇಕ ಮುಂದುವರೆದ ದೇಶಗಳ ಪ್ರಯತ್ನಗಳೂ ಸೇರಿದಂತೆ ಹಿಂದಿನ ಎಲ್ಲಾ ಸಾಧನೆಗಳನ್ನು ಮುರಿದು ಗಿನ್ನೀಸ್ ದಾಖಲೆಯನ್ನೂ ಬರೆದಿದೆ.

ವಿತ್ತ ವ್ಯವಹಾರದ ಮಾಹಿತಿ-ಶಿಕ್ಷಣ, ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ, ಖಾತೆದಾರರಿಗೆ 'ರುಪೆ' ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ಸೇವೆ(ಡಿಜಿಟಲ್ ಬ್ಯಾಂಕಿಂಗ್), 1ಲಕ್ಷ ಮೌಲ್ಯದ ಅಪಘಾತ ವಿಮೆ, ಮೊದಲ ಹಂತದಲ್ಲಿ 26ಜನವರಿ 2015ರ ಮೊದಲು ಖಾತೆಯನ್ನು ತೆರೆದವರಿಗೆ 30,000ರೂಪಾಯಿಗಳ ಜೀವವಿಮೆ, ಮೊದಲ ಆರು ತಿಂಗಳ ಸಕ್ರಿಯ ಕಾರ್ಯಕ್ಷಮತೆಯ ಆಧಾರದ ಮೇಲೆ 5,000ರುಪಾಯಿಗಳ ಓವರ್ ಡ್ರಾಫ್ಟ್ ಸೇವೆ ಇವು ಮೊದಲ ಹಂತವಾದರೆ, ಎರಡನೆ ಹಂತದಲ್ಲಿ ಅಂದರೆ ಆಗಸ್ಟ್ 2015 ರಿಂದ 14 ಆಗಸ್ಟ್ 2018ರ ಒಳಗೆ ತೆರೆಯುವ ಖಾತೆಗಳಿಗೆ ಮೈಕ್ರೋ ಇನ್ಶುರೆನ್ಸ್(ಕಿರು ವಿಮೆ), ಅಸಂಘಟಿತ ವಲಯಗಳಲ್ಲಿ ಪಿಂಚಣಿ ವ್ಯವಸ್ಥೆ ಇತ್ಯಾದಿ ಪ್ರಯೋಜನಗಳನ್ನು ನೀಡಲಾಗಿದೆ. ಇವೆಲ್ಲವೂ ಬ್ಯಾಂಕಿಂಗ್ ಕ್ಷೇತ್ರದಿಂದ ತುಸು ದೂರದಲ್ಲೇ ಉಳಿದಿದ್ದ ಅನೇಕಾನೇಕರಿಗೆ ವರದಾನವಾಗಿವೆ. ಬ್ಯಾಂಕ್‍ಗಳ ಮೂಲಕವೇ ಪಾರದರ್ಶಕ ವಿತ್ತ ವ್ಯವಹಾರಗಳಿಗೆ ತೆರೆದುಕೊಳ್ಳುವುದರಿಂದ ದೇಶದ ಆರ್ಥಿಕ ಪುನಶ್ಚೇತನಕ್ಕೂ ಸಹಕಾರಿಯಾಗಲಿದೆ.
ಬ್ಯಾಂಕ್‍ಗಳು ಬಡವರ ಬಂಧು ಆಗಬೇಕೆನ್ನುವ ನಿಟ್ಟಿನಲ್ಲಿ 1969ರಲ್ಲಿ ಅವುಗಳ ರಾಷ್ಟ್ರೀಕರಣದಿಂದ ಹಿಡಿದು 2014ರ ಜನಧನ ಯೋಜನೆಯವರೆಗೂ ಆಡಳಿತರೂಢ ಸರಕಾರಗಳು ಆರ್‍ಬಿಐ ಮೂಲಕ ಅನೇಕ ಯೋಜನೆಗಳನ್ನು, ಕಾರ್ಯಸೂಚಿಗಳನ್ನು ಹಾಗೂ ನಿರ್ದೇಶನಗಳನ್ನು ಕಾಲಕಾಲಕ್ಕೂ ಹೊರಡಿಸುತ್ತಾ ಬಂದಿವೆ. ಆದರೆ ಭಾರತದ ಇತಿಹಾಸದಲ್ಲೇ ಈ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿ, ಚಳುವಳಿಯ ಸ್ವರೂಪದಲ್ಲಿ ಮುನ್ನಡೆಸುತ್ತಿರುವ, ಈ ನಿಟ್ಟಿನಲ್ಲಿ ಯಶಸ್ವಿಯಾದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರಕಾರಕ್ಕೆ ಸಲ್ಲುತ್ತದೆ.
ಬ್ಯಾಂಕ್‍ಗಳ ರಾಷ್ಟ್ರೀಕರಣಗೊಂಡಾಗಲೇ ಅವುಗಳ ಶಾಖೆಗಳನ್ನು ಸಣ್ಣನಗರಗಳಲ್ಲಿ-ಅಭಿವೃದ್ಧಿ ಹೊಂದದ ದೊಡ್ಡಹಳ್ಳಿಗಳಲ್ಲಿ ಪಟ್ಟಣಗಳಲ್ಲಿ ತೆರೆಯಲು ಸೂಚಿಸಲಾಗಿತ್ತು. ಅವುಗಳು ಬ್ಯಾಂಕ್‍ಗಳಿಗೆ ಲಾಭದಾಯಕ ವ್ಯವಾಹಾರಕ್ಕೆ, ಶಾಖಾವಿಸ್ತರಣೆಯ ಅವಕಾಶವಾಗಿ ಗೋಚರಿಸಿತ್ತು. ಅಂತೆಯೇ ಅವುಗಳೂ ಅದೇ ದಾರಿಯಲ್ಲಿ ನಡೆದವು. ಆಗ ಪಾಸ್ ಪುಸ್ತಕದ ಮೂಲಕ ಕಡಿಮೆ ಮೊತ್ತದ ಸಂತೋಷಕರವಾದ ಜಮೆ-ವಿತರಣೆಗಳಿಗಷ್ಟೇ ಬ್ಯಾಂಕ್‍ಗಳು ಸೀಮಿತಗೊಂಡವು. ಉದ್ದೇಶವೇ ಅಷ್ಟು ಎನ್ನುವಷ್ಟರ ಮಟ್ಟಿಗೆ ಸುಲಭವಾದ ಅಂತೆಯೇ ಆಲಸಿಯಾದ ಬ್ಯಾಂಕಿಗ್‍ಯುಗವೊಂದು ಪ್ರಾರಂಭವಾಗಿತ್ತು. ಇಲ್ಲಿ ಅವಕಾಶ ವಂಚಿತವಾದದದ್ದು ಅಭಿವೃದ್ಧಿ ಹೊಂದದ ಗ್ರಾಮೀಣ ಭಾರತ ಮತ್ತು ಗ್ರಾಮ್ಯ ಜನಪದರು. ಅವರಿಗೆ ವರವಾಗಿದ್ದು ಸ್ಥಳೀಯ ಲೇವಾದೇವಿ ವ್ಯವಹಾರಸ್ಥರು ತದನಂತರ ಬಂದ ರೈತ ಮಿತ್ರ ಸಹಕಾರಿ ಬ್ಯಾಂಕ್‍ಗಳು.

ಖಾತೆ ತೆರೆಯುವ ಮುನ್ನ ಇದ್ದ ಅನೇಕ ಕಠಿಣವೂ,ಜಟಿಲವೂ ಆಗಿದ್ದ ನಿಯಮಗಳು ಹೊಸ ಕೆ.ವೈ.ಸಿ.(ನಿಮ್ಮ ಚಂದಾದಾರರನ್ನು ತಿಳಿದುಕೊಳ್ಳಿ) ನಿಯಮಗಳು ಸರಳವಾಗುತ್ತಾ ಸಾಗಿತು. ಎಲ್ಲಿಯವರೆಗೂ ಅಂದರೆ ಇಂದು ಕೇವಲ ತಮ್ಮ ಸ್ವಯಂದೃಢೀಕರಿಸಿದ ಗುರುತು ಚೀಟಿಯ ಸಹಾಯದಿಂದ ಖಾತೆಯೊಂದನ್ನು ತೆರೆಯುವಷ್ಟರ ಮಟ್ಟಿಗೆ. ಅಂತೆಯೇ 'ಝೀರೋ ಬ್ಯಾಲೆನ್ಸ್'(ಶೂನ್ಯ ಮೊತ್ತ) ಖಾತೆಗಳನ್ನೂ ತೆರೆಯುವಷ್ಟರ ಮಟ್ಟಿಗೆ. ಇವುಗಳ ಹಿಂದೆ ಇದ್ದದ್ದು ಸರಕಾರದಿಂದ ನಿರ್ದೇಶಿತಗೊಂಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್. ಆದರೆ ಬ್ಯಾಂಕ್‍ಗಳು ಖಾತೆಗಳನ್ನು ತೆರೆಯಲು ನೀಡಿದ್ದ ಗುರಿಯತ್ತ ಗಮನಹರಿಸಿದವೇ ವಿನಃ ಆ ಖಾತೆಗಳ ಮೌಲ್ಯಾತ್ಮಕ ಸಾಧ್ಯತೆಗಳ ಬಗ್ಗೆ ಗಮನಹರಿಸಲೇ ಇಲ್ಲ.

2010ರಲ್ಲಿ ಸರಕಾರದ ಮಾರ್ಗಸೂಚಿಯಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಮ್ಮ ದೇಶದ ಅವಕಾಶ ವಂಚಿತ ಪ್ರಜೆಗಳಿಗಾಗಿಯೇ ವಿತ್ತೀಯ ಒಳಗೊಳ್ಳುವಿಕೆಯ ಸೂತ್ರಕ್ಕೆ ನಾಂದಿಹಾಡಿತು. 2011ರಲ್ಲಿ ಕೇಂದ್ರ ಸರಕಾರ 'ಸ್ವಾಭಿಮಾನ' ಎಂಬ ಪ್ರಣಾಳಿಯ ಅಡಿಯಲ್ಲಿ 2000 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯುಳ್ಳ 72,000ಸಾವಿರ ಗ್ರಾಮಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸುವ ಮಹತ್ವದ ಕಾರ್ಯವನ್ನೂ ಕೈಗೊಂಡಿತು. 2011-2013ರ ಅವಧಿಯಲ್ಲಿ ದೇಶದಲ್ಲಿ ಸುಮಾರು 100 ಮಿಲಿಯನ್‍ನಷ್ಟು ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಹೇಳಿಕೊಳ್ಳವುದಕ್ಕೆ ಸಂಖ್ಯೆಯಲ್ಲಿ ಹೆಚ್ಚಳವಾಯಿತೇ ವಿನಹಃ ಜನರಿಗೆ ಸಹಾಯವಾಗಬಲ್ಲ ಸಣ್ಣ ಸಾಲ, ವಿಮಾ ಸೌಲಭ್ಯ, ಡಿಜಿಟಲೀಕೃತ ಸೇವೆ, ಪಿಂಚಣಿ ಸೇವೆ ಮೊದಲಾದ ಯಾವುದೇ ಯೋಜನೆ-ಯೋಚನೆ ಅದರಲ್ಲಿ ಒಳಗೊಳ್ಳದೆ ಫಲಾನುಭವಿಗಳಿಗೆ ಯಾವುದೇ ಪ್ರಯೋಜವಾಗದೆ ತನ್ನದೇ ಮಿತಿಗಳಿಂದ ಸೊರಗಿತ್ತು. ದೇಶದ ಸಮಗ್ರ ಪ್ರದೇಶ ಕೇಂದ್ರಿತ ಗುರಿಯಿಲ್ಲದಿರುವಿಕೆಯೂ ಅದರ ಸೋಲಿಗೆ ಮತ್ತೊಂದು ಕಾರಣ. ಈ ಅವಧಿಯಲ್ಲಿ ಅನೇಕ ಅವಕಾಶ ವಂಚಿತರಿಗಾಗಿ ಗರಿಷ್ಟ ಖಾತೆಗಳನ್ನು ತೆರೆಯುವ ಗುರಿಯನ್ನು ಬ್ಯಾಂಕ್‍ಗಳ ಮೇಲೆ ಹೊರಿಸಲಾಯಿತು. ಅವುಗಳೂ ಮತ್ತೆ ಸಂಖ್ಯೆಗಳತ್ತ ಮುಖ ಮಾಡಿದವು. ಆಗಲೇ ಆರ್.ಬಿ.ಐ,ನ ಕೆ.ವೈ,ಸಿ. ನಿಯಮಗಳು ಸರಳಗೊಂಡಿದ್ದರೂ ಮತ್ತಷ್ಟು ಶಕ್ತವಾಗಿ ಪ್ರಜಾಕೇಂದ್ರಿತಗೊಂಡವು. ಆದರೂ ದೇಶದ ಎಲ್ಲರನ್ನೂ ಬ್ಯಾಂಕ್ ಖಾತೆಯ ಅಡಿಯಲ್ಲಿ ತರುವ ಪ್ರಯತ್ನ ಸಾಕಾರವಾಗಲೇ ಇಲ್ಲ. ಈ ಕಾರ್ಯಸೂಚಿಯೂ ಇತರ ಸರಕಾರಿ ಕಾರ್ಯಯೋಜನೆಗಳಂತೆ ನಿರೀಕ್ಷಿತ ಗುರಿಯನ್ನು ತಲುಪಲಿಲ್ಲ. ವಿತ್ತೀಯ ಒಳಗೊಳ್ಳುವಿಕೆ ಸೂತ್ರವನ್ನು ಮತ್ತೆ ಮೂರು ವರ್ಷಗಳ ಕಾಲ ಅಂದರೆ 2016ರ ವರೆಗೂ ವಿಸ್ತರಿಸಲಾಯಿತು.

'ಜನಧನ ಯೋಜನೆ' ಬರದೇ ಹೋಗಿದ್ದರೆ ಆ ಕಾರ್ಯಸೂಚಿ ಗುರಿ ತಲುಪದ ಪಯಣದಂತೆ ಅದೆಷ್ಟು ವರ್ಷ ಸಾಗುತ್ತಿತ್ತೋ?! ಆದರೂ ಈ ಅವಧಿಯಲ್ಲಿ ಸರಕಾರದ ಒತ್ತಡದ ಪರಿಣಾಮವಾಗಿ ಸುಮಾರು 24.3ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿತ್ತು. ಆದರೆ ಯೋಜನೆಗೊಂದು ಸ್ಪಷ್ಟ ಸ್ವರೂಪ ನೀಡಿ, ಅದಕ್ಕೊಂದು ಚಳುವಳಿಯ ರೂಪನೀಡಿ, ಖುದ್ದು ಮಿಂಚಂಚೆಯ ಮೂಲಕ ಬ್ಯಾಂಕ್‍ನ ನೌಕರರನ್ನೂ, ವಿತ್ತೀಯ ಶಿಕ್ಷಣ-ಮಾಹಿತಿಯ ಮೂಲಕ ಅವಕಾಶ ವಂಚಿತ ಕಟ್ಟಕಡೆಯ ಅನಕ್ಷರಸ್ಥರನ್ನೂ ಪ್ರೇರೇಪಿಸಿ, ಕಳೆದ 6ತಿಂಗಳಲ್ಲಿ ಸಮರೋಪಾದಿಯಲ್ಲಿ 14.14ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಅಸಾಧ್ಯವಾದ ಕಾರ್ಯವನ್ನು ಸಾಧ್ಯವಾಗಿಸಿದ ಕೀರ್ತಿ ಪ್ರಧಾನಿಯವರಿಗೇ ಸಲ್ಲಬೇಕು. ಈ ಯೋಜನೆಯಲ್ಲಿನ ಮಿತಿಗಳು ನಗಣ್ಯ ಯಾಕೆಂದರೆ ಭಾರತದ ಕಟ್ಟಕಡೆಯ ವ್ಯಕ್ತಿಗಳಿಗೂ ವಿತ್ತ ಸೇವೆಗಳ ಛಾವಣಿಯಡಿಯಲ್ಲಿ ತರುತ್ತಿರುವುದು ಸುಲಭವಾದ ಕಾರ್ಯವಲ್ಲ. ಹಾಗೊಂದು ವೇಳೆ ಈ ಯೋಜನೆಯ ಮಿತಿಗಳು ಗೋಚರಿಸಿದರೆ ಅದು ಈ ಯೋಜನೆಯ ಆನ್ವಯಿಕತೆಯಲ್ಲಿ ಅದನ್ನು ಮತ್ತಷ್ಟು ಸದೃಢಪಡಿಸಲು ಮುಂದೆ ಅವಕಾಶಗಳಿವೆ. ಈಗಾಗಲೇ ಖಾತೆ ಇದ್ದವರೂ ಈ ಯೋಜನೆಯಡಿ ಖಾತೆಗಳನ್ನು ತೆರೆದಿರುವ ಉದಾಹರಣೆಗಳಿವೆ. ಸಂಖ್ಯೆಗಳ ಆಟವೇನೇ ಇದ್ದರೂ ಈ ಖಾತೆಗಳನ್ನು ಆಧಾರ್ ಗುರುತು ಚೀಟಿಯ ಜೊತೆಗೆ ಬೆಸೆಯುವ ಮೂಲಕ ಮುಂಬರುವ ದಿನಗಳಲ್ಲಿ ಯೋಜನೆಯ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವಿದೆ.

ಈಗಾಗಲೇ ಜಾರಿಯಲ್ಲಿರುವ ಮನ್‍ರೆಗಾ(ಉದ್ಯೋಗ ಖಾತ್ರಿ) ಫಲಾನುಭವಿಗಳು ಕಡ್ಡಾಯ ಬ್ಯಾಂಕ್ ಅಥವಾ ಅಂಚೆ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಜೊತೆಗೆ ಸುಮಾರು 28ಯೋಜನೆಗಳಲ್ಲಿ ಅಳವಡಿಕೆಯಾಗಿರುವಂತೆ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಯಂತಹ ಅತ್ಯಂತ ಸುವ್ಯವಸ್ಥಿತ, ಬಹು ವಿಶ್ವಾಸಾರ್ಹ ಹಾಗೂ ಲಾಭದಾಯಕ ಯೋಜನೆಗಳ ಯಶಸ್ಸಿಗೆ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಬೇಕೇ ಬೇಕು. ನೇರ ಹಣ ವರ್ಗಾವಣೆಯಿಂದ ಫಲಾನುಭವಿಗಳಿಗೆ ಭಷ್ಟಾಚಾರ ಮುಕ್ತ ಅನೇಕ ನೇರ ಪ್ರಯೋಜನಗಳಿವೆ. ಆಶಾ ಕಾರ್ಯಕರ್ತೆಯರಿಂದ ಹಿಡಿದು ಪಿಂಚಣಿದಾರರವರೆಗೂ ಎಲ್ಲರಿಗೂ ಇದೊಂದು ವರದಾನವಾಗಲಿದೆ.'ಆಧಾರ್' ಮತ್ತು ಬ್ಯಾಂಕ್ ಖಾತೆಗಳ ಜೋಡನೆಯಿಂದ ಸಹಾಯಧನ(ಸಬ್ಸಿಡಿ) ವಿತರಣೆಯಲ್ಲಿ ಆಗುತ್ತಿದ್ದ ಸೋರಿಕೆ,ಅಧಿಕಾರಿಗಳ ಪಾಲು, ಅನಪೇಕ್ಷಿತರ ಪಾಲು ಇಂತಹ ಅನೇಕ ತೊಡಕುಗಳು ನಿವಾರಣೆಗೊಂಡಿರುವುದಂತೂ ಸತ್ಯ.

ರಿಸರ್ವ್ ಬ್ಯಾಂಕ್‍ನ ದಾಖಲೆಗಳು ಹೇಳುವ ಪ್ರಕಾರ ದೇಶದ ಸರಿ ಸುಮಾರು 70% ಪ್ರತಿಶತ ಒಟ್ಟಾರೆ ಖಾತೆಗಳು ವ್ಯರ್ಥವೆಂದು ಹೇಳುವುದು ತಪ್ಪಾದರೂ ಅವು ಕೇವಲ ಡಾರ್ಮೆಂಟ್ (ಖಾಲಿ) ಖಾತೆಗಳು. ಅಂದರೆ ಆ ಖಾತೆಗಳ ಮೂಲಕ ಯಾವುದೇ ವ್ಯವಹಾರ ನಡೆಯುವುದಿಲ್ಲ. ಬ್ಯಾಂಕ್‍ಗಳಿಗೆ ಪ್ರತಿಯೊಂದು ಖಾತೆಯ ನಿರ್ವಹಣೆಗೆ ಕನಿಷ್ಟವೆಂದರೂ ನೂರು ರೂಪಾರಿಗಳಷ್ಟು ಶುಲ್ಕ ತಗಲುತ್ತದೆ. ಈ ಸುಪ್ತ ಖಾತೆಗಳ ನಿರ್ವಹಣಾ ವೆಚ್ಚ ಬ್ಯಾಂಕ್‍ಗಳ ಲಾಭದ ಗೌರವಯುತ ಪಾಲನ್ನು ಕಸಿದುಕೊಳ್ಳುತ್ತಿವೆ. ಖಾತೆಗಳ ಕನಿಷ್ಟ ಬಳಕೆಗೆ ಕಾರಣ ಬೇಡಿಕೆಯಿಲ್ಲದಿರುವಿಕೆಯಂತೂ ಅಲ್ಲವೇ ಅಲ್ಲ. ಆದರೆ, ಗ್ರಾಮೀಣ ಜನರಿಗೆ ಹತ್ತಿರವಾಗದ ಸೀಮಿತ ವ್ಯಾಪ್ತಿಯ ಜೊತೆಗೆ ಪ್ರಸ್ತುತ ಬ್ಯಾಂಕ್‍ಗಳ ಕಳಪೆ ಗುಣಮಟ್ಟದ ಸೇವೆಗಳು ಮತ್ತು ಅಂತಹ ಸೇವೆಗಳಿಂದ ತಮಗೆ ಯಾವುದೇ ರೀತಿಯ ಪ್ರಯೋಜನವೂ, ಸಂಬಂಧವೂ ಇಲ್ಲವೆಂದು ಭಾವಿಸುವ ಗ್ರಾಹಕರು. ಇನ್ನು ಬ್ಯಾಂಕಿಂಗ್ ಎಂದರೆ ಕೇವಲ ಹಣ ಜಮೆ, ವರ್ಗಾವಣೆ ಮತ್ತು ಹಿಂಪಡೆಯುವಿಕೆಯಷ್ಟೆ ಎಂದು ಭಾವಿಸಿರುವ ಸಂಕುಚಿತ ಆಲೋಚನೆ ಇತ್ಯಾದಿ ಗಂಭೀರ ಚಿಂತನೆಗಳು ಕೇವಲ ಕಾರಣಗಳಲ್ಲ, ಬ್ಯಾಂಕಿಂಗ್ ವಲಯದ ಮತ್ತೊಂದು ಮಜಲು. ಈ ಯೋಜನೆ ಸಕ್ರಿಯ ಬ್ಯಾಂಕಿಂಗ್ ಮಾದರಿಯ ಮೂಲಕ ಜನಸಾಮಾನ್ಯರಿಗೆ ಮತ್ತು ಬ್ಯಾಂಕ್‍ಗಳಿಗೆ ಪರಸ್ಪರ ಗೆಲುವನ್ನು ತಂದುಕೊಡುವುದರಲ್ಲಿ ಅನುಮಾನವಿಲ್ಲ. ಈ ಮುಖಾಂತರ ಬೇಡಿಕೆ ಮತ್ತು ಪೂರೈಕೆ ಎರಡರ ನಡುವೆ ಸಮಲಯತ್ವವನ್ನು ಸಾಧಿಸಲು ಸಾಧ್ಯವಿದೆ. ಜನಧನ ಯೋಜನೆಯ ಸಾಫಲ್ಯತೆಯ ನಂತರ ಸರಕಾರ ಮತ್ತು ಜನರ ನಡುವೆ ನಡೆಯುವ ಪ್ರತಿಯೊಂದು ವಿತ್ತೀಯ ಕೊಡುಕೊಳ್ಳುವಿಕೆಗಳಿಗೂ ಬ್ಯಾಂಕ್ ಖಾತೆ ಸಾಕ್ಷಿಯಾಗುತ್ತದೆ. ಅಧಿಕೃತ ವ್ಯವಹಾರಕ್ಕೊಂದು ಪ್ರಧಾನ ದಾರಿಯೂ, ವೇದಿಕೆಯೂ ಆಗಲಿದೆ. ಭವಿಷ್ಯದಲ್ಲಿ ಬ್ಯಾಂಕ್ ಖಾತೆಯು ಎಲ್ಲಾ ಫಲಾನುಭವಿಗಳ ವಿತ್ತ ಭವಿಷ್ಯವನ್ನು ಹೇಳಲಿದೆ. ಇದು ಕೇವಲ ದೇಶದ ಆರ್ಥಿಕತೆಗಷ್ಟೇ ಅಲ್ಲದೆ ಹಣಕಾಸಿನ ದ್ರವತೆ ಹೆಚ್ಚುವುದರಿಂದ ದೇಶದ ಅರ್ಥಿಕ ವ್ಯವಸ್ಥೆಗೂ ಲಾಭ, ಹಣದುಬ್ಬರ ನಿಯಂತ್ರಿತ ಪ್ರಜೆಗಳ ಸುಧಾರಿತ ಜೀವನ ಮಟ್ಟ ಹಾಗೂ ಬ್ಯಾಂಕ್‍ಗಳ ಹಿತಾಸಕ್ತಿಗೂ ಉತ್ತಮ ಬೆಳವಣಿಗೆಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್‍ನ ಮಾರ್ಗಸೂಚಿಯಡಿ ಹೊಸಮಾದರಿಯ ಪೇಮೆಂಟ್ ಬ್ಯಾಂಕ್, ಸಣ್ಣ ಬ್ಯಾಂಕ್‍ಗಳು ಮಾರುಕಟ್ಟಗೆ ಬರಲು ಟೊಂಕಕಟ್ಟಿ ನಿಂತಿವೆ. ಇವು ಉತ್ತಮ ಸ್ಪರ್ಧೆಯನ್ನು ಏರ್ಪಡಿಸುವುದರ ಜೊತೆಗೆ 'ಜನಧನ' ಯೋಜನೆಗೆ ಪೂರಕವಾಗುವ, ಯೋಜನೆಯನ್ನು ದೇಶದ ಉದ್ದಗಲಕ್ಕೂ ಸಮಾನಾಗಿ ವಿಸ್ತರಿಸುವ ಜೊತೆಗೆ ಉತ್ತಮ ಜನಕೇಂದ್ರಿತ ಸೇವೆಗಳೊಂದಿಗೆ ಜನಸ್ನೇಹಿಯೂ ಆಗಬೇಕಿವೆ. ಯಾಕೆಂದರೆ 'ಪ್ರಧಾನಮಂತ್ರಿ ಜನಧನ ಯೋಜನೆ'ಯ ಯಶಸ್ಸಿನಲ್ಲಿ ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆಯೂ, ಜನಮನದ ಶ್ರೇಯಾಭಿಲಾಷೆಯೂ, ಬ್ಯಾಂಕ್‍ಗಳ ಹಿತಾಸಕ್ತಿಯೂ ಅಡಗಿದೆ.

---------------
JAI HIND.

1 comment:

  1. Good analysis from a common man with good heart

    ReplyDelete