Saturday, April 25, 2015

ಕನ್ನಡ ದೈನಿಕಗಳ ಈ ಕ್ರಮ ಇತರರಿಗೂ ಮಾದರಿಯಾಗಲಿ. ವಿಜಯವಾಣಿಯಿಂದ ಮೊದಲ್ಗೊಂಡು ಸಮಯ ನ್ಯೂಸ್ ವರೆಗೆ.


ಕನ್ನಡ ದೈನಿಕಗಳ
 ಈ ಕ್ರಮ ಇತರರಿಗೂ ಮಾದರಿಯಾಗಲಿ

ಕನ್ನಡ ಸುದ್ದಿ ಮಾಧ್ಯಮದಲ್ಲಿ ವಿಜಯವಾಣಿ ಪತ್ರಿಕೆಯಿಂದ ಪ್ರಾರಂಭವಾದ ಈ ಅಭಿಯಾನಕ್ಕೆ, ಹೊಸದಿಗಂತ ಪತ್ರಿಕೆಯ ಜೊತೆಗೆ ಸಮಯ ನ್ಯೂಸ್ ಕೂಡ ಕೈಜೋಡಿಸಿದ್ದು ಹೆಮ್ಮೆಯ ಸಂಗತಿ.

#ವಿಶೇ‍ಷ ಸೂಚನೆ: (ಈ ಸಂಗತಿಯನ್ನು ತಿಳಿಸದಿದ್ದರೆ ಹಂಚಿಕೊಂಡ ಮಾಹಿತಿ ಅರ್ಥಪೂರ್ಣವೂ ಆಗಿರುವುದಿಲ್ಲ, ಸಮಗ್ರವೂ ಆಗಿರುವುದಿಲ್ಲ. ಯಾವುದೇ ಸಂಗತಿಯ ಪ್ರಥಮರನ್ನು ಸ್ಮರಿಸದೇ ಮುನ್ನಡೆಯುವುದು ಅತ್ಯಂತ ಬೇಜವಾಬ್ದಾರಿಯುತ ನಡೆಯಾಗುತ್ತದೆ. ಆದ್ದರಿಂದ ಮೂಲ ಬರಹವನ್ನು ತಿದ್ದದೆ ಕೇವಲ ಈ ಒಂದು ಸ್ಪಷ್ಟನೆಯನ್ನು ಮಾತ್ರ ಹೆಚ್ಚುವರಿಯಾಗಿ ಸೇರಿಸುತ್ತಿದ್ದೇನೆ.)

ನಾನು ಹೊಸದಿಗಂತ ಪತ್ರಿಕೆಯನ್ನು ಅಂತರ್ಜಾಲದಲ್ಲಿ ಓದುತ್ತಿದ್ದಾಗ ಅಂದು ಕಣ್ಣಿಗೆ ಬಿದ್ದ ಈ ಉತ್ತಮ ಅಭಿಯಾನವನ್ನು ಈ-ಮೇಲ್ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳುತ್ತಿದ್ದೆ. ನನ್ನ ಓದಿನ ಮಿತಿಯ ಕಾರಣದಿಂದ ಮತ್ತು ಆ ಮೊದಲು ಕನ್ನಡ ಪತ್ರಿಕೆಯಲ್ಲಿ ಈ ಸುದ್ದಿಯನ್ನು ಗಮನಿಸದಿದ್ದ ಕಾರಣ (ಅದಾಗಲೇ ಕೆಲವು ಹಿಂದಿ ಪತ್ರಿಕೆಗಳಲ್ಲಿ-ಸುದ್ದಿ ಮಾಧ್ಯಮದಲ್ಲಿ ಈ ಅಭಿಯಾನ ಪ್ರಾರಂಭಗೊಂಡಿದ್ದನ್ನು ಗಮನಿಸಿದ್ದೆ.), ಆಲ್ಲಿ ಸೂಚಿಸಿದ್ದು ಮೇಲಿನ ಪತ್ರಿಕೆಯ ಹೆಸರನ್ನು ಮಾತ್ರ. ಆದರೆ ವಿಜಯವಾಣಿ ಪತ್ರಿಕೆಯ ಸಂಪಾದಕರು ಮಿಂಚಂಚೆಗೆ ಪ್ರತಿಕ್ರಿಯಿಸಿ ಈ ಅಭಿಯಾನದ ಪ್ರಥಮ ಪ್ರಯತ್ನ ಸುದ್ದಿ ಸಮೇತ ಮುಖಪುಟದಲ್ಲೇ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದನ್ನು ನನ್ನ ಗಮನಕ್ಕೆ ತಂದರು ಮತ್ತು ನನ್ನಿಂದಾದ ಪ್ರಮಾದವನ್ನು ಸಹೃದಯತೆಯ ಮಾಹಿತಿಯ ಮುಖೇನ ತಿದ್ದಿದ್ದರು. ಅವರು ತಿಳಿಸದೇ ಇದ್ದಿದ್ದರೆ ಅದು ಪ್ರಾಯಶಃ ನನಗೆಂದಿಗೂ ತಿಳಿಯುತ್ತಲೇ ಇರಲಿಲ್ಲವೇನೋ.  ಆದರೂ ನನ್ನಿಂದಾದ ಪ್ರಮಾದವನ್ನು ಬಹಳ ತಡವಾಗಿಯೇ ಸರಿಪಡಿಸಿಕೊಂಡು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇನ್ನೊಂದು ಮಾತು- ಇತರ ಪತ್ರಿಕೆಗಳೂ ವಿವಿಧ ಸ್ವರೂಪಗಳಲ್ಲಿ ಈ ಅಭಿಯಾನದ ಭಾಗವಾಗಿರಬಹುದು. ಅಭಿಯಾನಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿರಬಹುದು. ಆ ಬಗ್ಗೆ ನನಗೆ ತಿಳುವಳಿಕೆಯಿಲ್ಲ. ಅವರನ್ನೂ ಇಲ್ಲಿ ಸ್ಮರಿಸುತ್ತೇನೆ.

ಹೊಸದಿಗಂತ ಹೊರತಂದಿರುವ ಅಡುಗೆ ಅನಿಲ ಎಲ್.ಪಿ.ಜಿ. ಮೇಲಿನ ಪ್ರೋತ್ಸಾಹಧನ(ಸಬ್ಸಿಡಿ) ವನ್ನು ಸ್ವಯಂ ಪ್ರೇರಿತರಾಗಿ ತ್ಯಜಿಸಿದವರನ್ನು ಗುರುತಿಸಿ, ಪತ್ರಿಕೆಯ ಮೂಲಕ ಅವರ ಕಾರ್ಯವನ್ನು ಇತರರಿಗೂ ತಲುಪಿಸುವ "ಭೇಷ್'' ಪ್ರಯತ್ನ ಅತ್ಯಂತ ಶ್ಲಾಘನೀಯ ಮತ್ತು ಸಾರ್ವಕಾಲಿಕ ಮಾದರಿ. ಪ್ರತಿಕೆಗಳು ಕೇವಲ ನಮ್ಮ ವ್ಯವಸ್ಥೆಯ ಕಾವಲು ನಾಯಿಗಳಲ್ಲ. ಬದಲಾಗಿ ನಮ್ಮ ಸಮಾಜವನ್ನು ಉತ್ತಮ ರೀತಿಯಲ್ಲಿ ಬೆಳೆಸಿ ಮುನ್ನಡೆಸುವ, ಸರಕಾರಗಳ ಇಂತಹ ಅರ್ಥಪೂರ್ಣ, ಸಕಾರಾತ್ಮಕ ಮತ್ತು ಸಂರಚನಾತ್ಮಕ ಯೋಜನೆಗಳನ್ನು ಹೆಚ್ಚು ವಿಸ್ತøತಗೊಳಿಸಿ ಜನರಿಗೆ ಮುಟ್ಟಿಸುವ ಮೂಲಕ ಸಮಾಜವನ್ನು ಜಾಗೃತಗೊಳಿಸುವ, ಸಂವೇದನಶೀಲಗೊಳಿಸುವ ಜವಾಬ್ದಾರಿಯೂ ಸಮೂಹ ಮಾಧ್ಯಮಗಳ ಮೇಲಿದೆ. ಯಾಕೆಂದರೆ ಜನರ ಭಾವನೆಗಳನ್ನು,ಅನಿಸಿಕೆಗಳನ್ನು ನಿರಂತರವಾಗಿ ರೂಪುಗೊಳಿಸುತ್ತಿರುವುದು ಮಾಧ್ಯಮಗಳು. ಕನ್ನಡದ ಪತ್ರಿಕಾರಂಗದಲ್ಲಿ ಇಂತಹ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿರುತ್ತವೆ. ವಿವಿಧ ಸಂದರ್ಭಗಳಲ್ಲಿ ಕೆಲವು ಪತ್ರಿಕೆಗಳು ಈ ನಿಟ್ಟಿನಲ್ಲಿ ಕ್ರಿಯಾಶಿಲತೆಯಿಂದ ಕಾರ್ಯೋನ್ಮುಖವಾಗಿವೆ. ಇಂತಹ ಅನ್ಯೂಹ ಪ್ರಯತ್ನಗಳ ಸಾಲಿಗೆ ಹೊಸದಿಂಗತದ ಈ ಕ್ರಮವೂ ಸೇರುತ್ತದೆ. ಹೊಸದಿಗಂತ ಕನ್ನಡ ದೈನಿಕ ೨೫-೦೪-೨೦೧೫.


ಪ್ರಧಾನ ಮಂತ್ರಿಯವರ ಕರೆಗೆ ಓಗೊಟ್ಟು ಅನೇಕ ಶ್ರೀಮಂತರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ದೇಶದ ಸುಮಾರು 2.5 ಲಕ್ಷ ಜನರು ಈಗಾಗಲೇ ಅಡಿಗೆ ಅನಿಲದ ಪ್ರೋತ್ಸಾಹ ಧನವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಿದ್ದಾರೆ ಅಥವಾ ಹೆಚ್ಚು ಶಕ್ತಿಯುತವಾಗಿ ಹೇಳಬೇಕಾದರೆ ಸಬ್ಸಿಡಿ ಮೊತ್ತವನ್ನು ನಿರಾಕರಿಸಿದ್ದಾರೆ. ಬಡವರಿಗಾಗಿ ತುಡಿವ, ತುಡಿದ ಮತ್ತು ತುಡಿಯುತ್ತಿರುವ ಮನಸ್ಸುಗಳನ್ನು ಗುರುತಿಸುವುದು, ಪ್ರೋತ್ಸಾಹಿಸುವ ಮತ್ತು ಆ ಮೂಲಕ ಅನೇಕರಿಗೆ ಸ್ಫೂರ್ತಿ ತುಂಬುವ ಕೆಲಸ ಹೊಸದಿಗಂತದ ಈ ಪ್ರಯತ್ನದಿಂದ ಸಾಧ್ಯವಾಗಲಿದೆ. ಅನೇಕ ಅನುಕೂಲಸ್ಥರು, ಆರ್ಥಿಕವಾಗಿ ಸದೃಢರು ಇದರಿಂದ ಪ್ರೇರಿತರಾಗಿ ಅವರಿಗೆ ದೊರೆಯುವ ಪ್ರೋತ್ಸಾಹ ಧನವನ್ನೂ ತ್ಯಜಿಸುವಂತಾದರೆ ನಿಮ್ಮ ಪ್ರಯತ್ನ ಸಾರ್ಥಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಕೇವಲ ಇಂಧನ ಪ್ರೋತ್ಸಾಹ ಧನವೊಂದರಿಂದಲೇ ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರದ ಬೊಕ್ಕಸಕ್ಕೆ 46,458 ಕೋಟಿ ಹೊರೆಯಾಗಿತ್ತು. 2013-14  ಕೇವಲ ಎಲ.ಪಿ.ಜಿ. ಮೇಲಿನ ಪ್ರೋತ್ಸಾಹಧನವೇ 1,904 ಕೋಟಿಯಾಗಿತ್ತು. ಪ್ರಸ್ತುತ ಹನ್ನೆರಡು 14.2 ಕೆ.ಜಿ. ಸಿಲಿಂಡರ್ ಅಥವಾ ಮೂವತ್ತು 5 ಕೆ.ಜಿಯ ಸಿಲಿಂಡರ್ ಗಳು ಪ್ರೋತ್ಸಾಹಧನ ಸಹಿತವಾಗಿ ದೊರೆಯುತ್ತದೆ. ದೆಹಲಿಯಲ್ಲಿ ಪ್ರೋತ್ಸಾಹಧನದಿಂದ ಕೂಡಿದ(ಸಬ್ಸಿಡೈಸ್ಡ್) ಪ್ರತೀ 14.2ಕೆ.ಜಿ. ಸಿಲಿಂಡರ್ ನ ಮೊತ್ತ 417 ರೂಪಾಯಿಗಳು. ಮತ್ತು 5ಕೆ.ಜಿ. ಸಿಲಿಂಡರ್ ಮೊತ್ತ 155 ರೂಪಾಯಿಗಳು. ಸಬ್ಸಿಡಿ ರಹಿತವಾಗಿ ಇವುಗಳ ಬೆಲೆ ಕ್ರಮವಾಗಿ ರೂ. 708.50 ಮತ್ತು 351 ರೂಪಾಯಿಗಳು. ಈ ಮೊತ್ತ ಆರ್ಥಿಕವಾಗಿ ಶಕ್ತರಾದ ಶ್ರೀಮಂತರಿಗೂ ಹಂಚಿಕೆಯಾಗುವುದರಿಂದ ಬಡವರಿಗೆ ತಲುಪಬಹುದಾದ ಮೊತ್ತ ಕಡಿಮೆಗೊಳ್ಳುತ್ತದೆ. ಇದರ ಸ್ವ-ತ್ಯಾಗದಿಂದ/ಕಡಿತದಿಂದ ಸರಕಾರದ ಮೇಲಿನ ಹೊರೆ ತುಸು ಕಡಿಮೆಯಾಗುತ್ತದೆ. ಅಂದಹಾಗೆ ಕೇಂದ್ರ ಸರಕಾರ ಯಾರ ಮೇಲಿನ ಸಬ್ಸಿಡಿಯನ್ನೂ ತೆಗೆದುಹಾಕುತ್ತಿಲ್ಲ. ಇದನ್ನು ತ್ಯಜಿಸುವುದಾಗಲೀ, ಕೆಲವರಿಗೆ ಅನಗತ್ಯವಾಗಿದ್ದರೂ ಮುಂದುವರೆಸುವುದಾಗಲಿ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ವಿವೇಚನೆಗೆ ಬಿಟ್ಟ ವಿಚಾರ. ಅಲ್ಲದೆ ಈಗ ಪ್ರೋತ್ಸಾಹ ಧನ ತ್ಯಾಗದಿಂದ ಉಳಿಯುವ ಮೊತ್ತವನ್ನು ಬಡವರ ಇತರ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ವಿನಿಯೋಗವಾಗಬಹುದು.

ವಾಯುಮಾಲಿನ್ಯದ ದೃಷ್ಟಿಯಿಂದ ನೋಡಿದಾಗ ಇತರ ಅನಿಲಗಳಿಗೆ ಹೋಲಿಸಿದರೆ ಎಲ.ಪಿ.ಜಿ., ಸಿಎನ್.ಜಿ. ಗ್ಯಾಸ್‍ಗಳಿಂದ ಹೊರಡುವ ವಿಷಾನೀಲದ ಮೊತ್ತ ಕಡಿಮೆ. ಸೀಮೆ ಎಣ್ಣೆಯ ಮೇಲಿನ ಸಬ್ಸಿಡಿಯನ್ನು ತೆಗೆದುಹಾಕುವ ನಿರ್ಧಾರದ ಹಿಂದಿದ್ದ ಅನೇಕ ಕಾರಣಗಳಲ್ಲಿ ಇದೂ ಒಂದು. ಇನ್ನು ನಮ್ಮ ಹಳ್ಳಿಗಳಲ್ಲಿ ಬಳಸುವ ಬಯೋಗ್ಯಾಸ್, ಗೋಬರ್‍ಗ್ಯಾಸ್ ಮೊದಲಾದ ತಂತ್ರಜ್ಞಾನಗಳನ್ನೂ ಹೆಚ್ಚು ಸಮರ್ಪಕವಾಗಿ ಅಭಿವೃದ್ಧಿಪಡಿಸುವ ತುರ್ತಾದ ಅನಿವಾರ್ಯತೆಯೂ ಸರಕಾರ,ಖಾಸಗಿ ಸಂಘ ಸಂಸ್ಥೆಗಳ ಮೇಲಿದೆ. ಮುಗಿದುಹೋಗುವ ಇಂಧನಗಳ ಬದಲಾಗಿ ಅನ್ಯಮೂಲದ ಇಂಧನ ಬಳಕೆಯ ಬಗ್ಗೆ ದೇಶ ಮತ್ತು ರಾಜ್ಯಗಳು ಗಮನಹರಿಸಲೇಬೇಕು. ಯತೇಚ್ಛವಾಗಿರುವ ಸೌರಶಕ್ತಿಯ ತಾಂತ್ರಿಕ ಬಳಕೆ, ಘನತ್ಯಾಜ್ಯಗಳ ಮೂಲಕ ಇಂಧನವನ್ನು ಸೃಜಿಸುವ-ಸೃಷ್ಟಿಸುವ ಅನೇಕ ಪ್ರಯತ್ನಗಳು ನಿಧಾನವಾಗಿ ಮುಖ್ಯವಾಹಿನಿಗೆ ಬರುತ್ತಿವೆಯಾದರೂ ಇಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆ, ಅಧ್ಯಯನ, ಅಭಿವೃದ್ಧಿಯು ಕ್ಷಿಪ್ರವಾಗಿ ಗರಿಗೆದರಬೇಕಿದೆ.

Hosadigantha kannada daily 25-04-2015.

ಶ್ರೀ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಈಗಾಗಲೇ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್, ವಿತ್ತ ಸಚಿವ ಅರುಣ್ ಜೇಟ್ಲಿ, ಕೆಲವು ಕೇಂದ್ರ ಸಚಿವರು, ಸಂಸದರು, ಶಾಸಕರು, ತೀರಾ ಇತ್ತೀಚೆಗೆ ಉದ್ಯಮ ವಲಯದ ಅನಿಲ್ ಅಂಬಾನಿ ಮತ್ತು ನಮ್ಮ ನಡುವೆಯೇ ಇರುವ ಯಾರೂ ಗುರುತಿಸದ ಅನೇಕ ಜನರು. (ಸಾಧ್ಯವಾದರೆ ಈಗಾಗಲೇ ಸಹಾಯಧನವನ್ನು ತ್ಯಜಿಸಿ ಮಾದರಿಯಾಗಿರುವ ಸರಕಾರದ ಒಳಹೊರಗಿರುವ ಗಣ್ಯ ವ್ಯಕ್ತಿಗಳ ಪಟ್ಟಿಯನ್ನೂ ಪ್ರಕಟಿಸಿ.) ಅವರನ್ನು ಬೆಂಬಲಿಸಿ, ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಹುರಿದುಂಬಿಸಲು ಹೊರಟಿರುವ ಹೊಸದಿಗಂತ ಬಳಕ್ಕೆ ಮತ್ತೊಮ್ಮೆ ಶುಭಾಶಯಗಳು. ಅನೇಕರಿಗೆ ಇದು ದಾರಿದೀಪವಾಗಲಿ.


ಮುಗಿಸುವ ಮುನ್ನ: ಅಗತ್ಯವಾಗಿ ಪತ್ರಿಕೆಯ "ಮುಖಪುಟ"ದಲ್ಲೇ ಇಂತಹ 'ದಾನಿ'(ಇವರ ತ್ಯಾಗ ಇತರರ ಏಳಿಗೆಗೆ ದಾನ) ಗಳ "ವರ್ಣರಂಜಿತ" ಭಾವಚಿತ್ರ ಸಹಿತ ವಿವರಗಳನ್ನು ಪ್ರಕಟಿಸಿ, ಇವರನ್ನೂ ಪ್ರೋತ್ಸಾಹಿಸಿ ಮತ್ತು ಇತರರನ್ನೂ ಪ್ರೇರೇಪಿಸಿ

ಧನ್ಯವಾದ.

ಜೈ ಹಿಂದ್
ಶ್ರೇಯಾಂಕ ಎಸ್ ರಾನಡೆ.

No comments:

Post a Comment