Saturday, January 30, 2016

All about Call Drops. ಕರೆ ಕಡಿತವೆಂಬ ಮಾಯಾಜಾಲ

ಕರೆ ಕಡಿತವೆಂಬ ಮಾಯಾಜಾಲದಲ್ಲಿ ಬಂಧಿಯಾದ ಚಂದಾದಾದರು


-ಕರೆ ಕಡಿತದ ಜೊತೆಗೆ ದರ ಕಡಿತ. ಒಟ್ಟಿನಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಟೆಲಿಕಾಂ ಕಂಪೆನಿಗಳ ಹಳೆಯ ಆಟ.
ಫೋನ್‍ನಲ್ಲಿ ತುರ್ತಾದ ಮಾತುಕತೆಯಲ್ಲಿರುವಾಗ ತಟ್ಟನೆ ಕರೆ ಕಡಿತಗೊಳ್ಳುತ್ತದೆ. ಇದು ಇದೇ ಮೊದಲ ಬಾರಿಗೆ ನಡೆದದ್ದಲ್ಲ. ಆದರೆ ಪೂರ್ಣ ನಿಮಿಷದ ಕರೆಯ ದರ ಕಡಿತಗೊಳ್ಳುತ್ತದೆ. ಇದಕ್ಕೆ ಕಾಲ್ ಡ್ರಾಪ್ ಎಂದು ಹೆಸರು. ಈ ತಾಂತ್ರಿಕ ಸಮಸ್ಯೆ ಹೆಚ್ಚು ಬಳಕೆದಾರರ ಒತ್ತಡವಿರುವ ಪ್ರದೇಶದಲ್ಲಿ ಅತ್ಯಧಿಕ. ಟೆಲಿಕಾಂ ಕಂಪೆನಿಗಳ ವ್ಯವಸ್ಥಿತ ಪಿತೂರಿಯೇ ಇದಕ್ಕೆ ಕಾರಣ ಎಂದು ಟೆಲಿಕಾಂ ಇಲಾಖೆ ದೂರುತ್ತದೆ. ಪ್ರತಿಯಾಗಿ ಟೆಲಿಕಾಂ ಆಪರೇಟರ್‍ಗಳು ಸ್ಪೆಕ್ಟ್ರಂ ತರಾಂಗಂತರಗಳ ಕೊರತೆ, ಟವರ್‍ಗಳ ಅಲಭ್ಯತೆಯ ಕಾರಣ ನೀಡುತ್ತವೆ. ನಿಮಗೂ ಅನೇಕ ಬಾರಿ ಮಾತಿನ ನಡುವೆ ಅನಿರೀಕ್ಷಿತವಾಗಿ ಕರೆಗಳು ಕಡಿತಗೊಂಡಿರಬಹುದು. ಇದರಿಂದ ಯಾವ ಗ್ರಾಹಕರಿಗೆ ತಾನೆ ಸಿಟ್ಟು ಬರುವುದಿಲ್ಲ. ಆದರೆ ಅದಕ್ಕೆ ಮೊಬೈಲ್ ಕಂಪೆನಿಗಳು ಯಾವುದೇ ಪರಿಹಾರವನ್ನು ನೀಡುವುದಿಲ್ಲ.

ಮಹಾನಗರಗಳಲ್ಲಿ ಕರೆ ಕಡಿತದ ದರ 12.5%, ಅಂದರೆ ಪ್ರತಿ ಹತ್ತರಲ್ಲಿ ಒಂದು ಕರೆ ಕಾಲ್ ಡ್ರಾಪ್‍ಗೆ ಬಲಿಯಾಗುತ್ತದೆ. ಇನ್ನು ನಗರಗಳ ಟೆಲಿಡೆಂಸಿಟಿ ಪ್ರಮಾಣ 100ಕ್ಕೂ ಅಧಿಕ. ರಾಜಧಾನಿ ದೆಹಲಿಯಲ್ಲಿ ಇದು ಅತ್ಯಧಿಕ ಅಂದರೆ 222.7. ಇತರ ನಗರಗಳಲ್ಲೂ ಈ ಸ್ಥಿತಿ ಭಿನ್ನವಾಗಿಲ್ಲ.

ಟೆಲಿಕಾಂ ಕಂಪೆನಿಗಳು ತರಂಗಾಂತರಗಳ ಖರೀದಿಗಾಗಿ 1,29,000 ಕೋಟಿಯನ್ನು ಹೂಡಿದ್ದಾಗಿ ಹೇಳುತ್ತಿವೆ. ಈ ಹೂಡಿಕೆಯನ್ನು ಗ್ರಾಹಕರಿಂದಲೇ ಬಯಸುತ್ತವೆ. ಟಾರಿಫ್ ಯೋಜನೆಗಳಿಗೆ ಅನುಗುಣವಾಗಿ ಮೊಬೈಲ್ ಕಂಪೆನಿಗಳಿಗೆ ಕರೆ ಕಡಿತದಿಂದ ಲಾಭವಾಗುತ್ತದೆ. ಶೇಕಡಾ 50% ಪ್ರತಿಶತಕ್ಕಿಂತಲೂ ಕಡಿಮೆ ಜನರು ಮಾತ್ರ ಸೆಕೆಂಡ್ಸ್ ಯೋಜನೆ ಹೊಂದಿದ್ದಾರೆ, ಅವರು ಮಾತ್ರ ಈ ಸಮಸ್ಯೆಯಿಂದ ಮುಕ್ತರು. ನಿಮಿಷಗಳ ಯೋಜನೆ ಹೊಂದಿರುವವರು ಸದೈವ ವಂಚಿತರು.

ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಾದ್ದು ಸರಕಾರ ಮತ್ತು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್) ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಟ್ರಾಯ್ ಈ ಸಮಸ್ಯೆಗೆ ಸಾರ್ವಜನಿಕರ ಅಭಿಪ್ರಾಯವನ್ನು ಕೋರಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿಯವರು ಟೆಲಿಕಾಂ ಕಂಪೆನಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸರಕಾರ ಇನ್ನು ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನೂ, ಕಟ್ಟುನಿಟ್ಟಿನ ನಿಯಮವನ್ನು ರೂಪಿಸುವ ಕಾರ್ಯದಲ್ಲಿದೆ.

ಸಾಮಾನ್ಯವಾಗಿ ಮೊಬೈಲ್‍ಗಳು 300 ಮೆಗಾಹಟ್ಜ್ ನಿಂದ 3,000 ಮೆಗಾಹಟ್ಜ್ ವ್ಯಾಪ್ತಿಯ ರೇಡಿಯೋ ಫ್ರೀಕ್ವೆನ್ಸಿಯನ್ನು ಬಳಸಿಕೊಳ್ಳುತ್ತವೆ. ವಾಸ್ತವವಾಗಿ ಉಲ್ಲೇಖಿಸಿದ ಪೂರ್ಣ ವ್ಯಾಪ್ತಿ ಬಳಕೆಗೆ ಲಭ್ಯವಿರುವುದಿಲ್ಲ. ಕಡಿಮೆ ಫ್ರಿಕ್ವೆನ್ಸಿ ಇದ್ದಷ್ಟು ಹೆಚ್ಚು ಸ್ಪಷ್ಟ ವಾಹಕತೆ ಇರುತ್ತದೆ. ಹಾಗಾಗಿ ಮೊಬೈಲ್ ಕಂಪೆನಿಗಳು ಪ್ರತಿ ಬ್ಯಾಂಡ್‍ನಲ್ಲಿಯೂ ಕಡಿಮೆ ಫ್ರಿಕ್ವೆನ್ಸಿಯನ್ನು ಆಯ್ದುಕೊಳ್ಳುತ್ತವೆ. ಉದಾಹರಣೆಗೆ ಟೆಲಿಕಾಂ ಕಂಪೆನಿಯೊಂದು 2000 ಮೆ.ಹ ಬದಲು 800 ಮೆ.ಹಗೆ ಮೊರೆಹೋಗುತ್ತವೆ. ಪ್ರತೀ ಬ್ಯಾಂಡ್‍ನಲ್ಲಿರುವ ಸೀಮಿತ ಸ್ಥಳಾವಕಾಶದಲ್ಲಿ ಎಲ್ಲಾ ಕಂಪೆನಿಗಳು ಕಡಿಮೆ ಫ್ರಿಕ್ವೆನ್ಸಿಗಾಗಿ ಹೋರಾಡುತ್ತವೆ. ಅಂದರೆ ಶಕ್ತಿಯುತವಾದ ಸಣ್ಣ ಸ್ಥಳ ವನ್ನು ದೇಶದ 13 ಟೆಲಿಕಾಂ ಕಂಪೆನಿಗಳೂ ಆಶಿಸುತ್ತವೆ. ಇದರ ಪರಿಣಾಮ ಕಂಪೆನಿಗಳ ಬಳಿ ಮೌಲ್ಯಯುತ ಫ್ರಿಕ್ವೆನ್ಸಿಯ ಪ್ರಮಾಣ ಕಡಿಮೆಯಿರುತ್ತದೆ. ತೀರಾ ಕಡಿಮೆಯಿದ್ದಾಗ ಅನಿವಾರ್ಯವಾಗಿ ಧ್ವನಿ ಸೇವೆಯಲ್ಲಿ ಕಳಪೆ ಗುಣಮಟ್ಟದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಪರಿಣಾಮ ಕರೆ ಕಡಿತ, ಇಂಟರ್ನೆಟ್ ಬಳಕೆಯಲ್ಲಿ ತೊಡಕು ಇತ್ಯಾದಿ ಸಮಸ್ಯೆಗಳು ನಿರಂತರವಾಗಿ ತಲೆದೋರುತ್ತವೆ. ಪ್ರದೇಶವೊಂದರಲ್ಲಿ ಟೆಲಿಕಾಂ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಈ ಸಮಸ್ಯೆ ವೃದ್ಧಿಸುತ್ತದೆ.

ಚೀನಾ ದೇಶದ ನಂತರ ಅತೀ ಹೆಚ್ಚು ಮೊಬೈಲ್ ಚಂದಾದಾರರಿರುವುದು ಭಾರತದಲ್ಲಿ. ಪ್ರಸ್ತುತ 961 ಮಿಲಿಯನ್ ಮೊಬೈಲ್ ಬಳಕೆದಾರರಿದ್ದಾರೆ. ವಿಶ್ವದ ಪ್ರೌಢ, ಬೆಳೆಯುತ್ತಿರುವ ಟೆಲಿಕಾಂ ಮಾರುಕಟ್ಟೆ, ಅನಿಯಮಿತ ಬೇಡಿಕೆಯ ಕಾರಣದಿಂದ ಅನೇಕ ಟೆಲಿಕಾಂ ಕಂಪೆನಿಗಳು ಭಾರತಕ್ಕೆ ಕಾಲಿಡುತ್ತಿವೆ. ಹೀಗಾದಾಗ ಬ್ಯಾಂಡ್‍ನ ಲಭ್ಯತೆಯ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತದೆ. ಹಂಚಿಕೆಯಾದ ನಂತರವೂ ಮುಗಿಯದ ಸಂಪನ್ಮೂಲ ಸ್ಪೆಕ್ಟ್ರಂ ತರಂಗಾಂತರ. ಆದರೆ ಇದರ ಹಂಚಿಕೆಗೆ ವಿಶ್ವಮಾನ್ಯ ನಿಯಮವಿದೆ. ಹಾಗಾಗಿ ಅದನ್ನು ಬೇಕಾಬಿಟ್ಟಿ ಹಂಚುವಂತಿಲ್ಲ.

ಮೊಬೈಲ್ ಟವರ್‍ಗಳು ರೇಡಿಯೋ ತರಾಂಗಂತರಗಳನ್ನು ಸುಲಭವಾಗಿ ಚಲಿಸಲು ಸಹಾಯ ಮಾಡುತ್ತವೆ. ನಮ್ಮ ದೇಶದಲ್ಲಿ ಸುಮಾರು 5,50,000 ಲಕ್ಷ ಮೊಬೈಲ್ ಟವರ್‍ಗಳಿವೆ. ಈ ಸಂಖ್ಯೆ ಇನ್ನೂ ಬೆಳೆಯುತ್ತಿದೆ. ಅಂತೆಯೇ ಟೆಲಿಕಾಂ ಕಂಪೆನಿಗಳಿಗೆ ಸುಮಾರು 1 ಲಕ್ಷ ಟವರ್‍ಗಳ ಅನಿವಾರ್ಯತೆಯಿದೆ. ಕಡಿಮೆ ಫ್ರಿಕ್ವೆನ್ಸಿಯ ರೆಡಿಯೋ ಬ್ಯಾಂಡ್‍ಗಳು ದೂರ ವಿಸ್ತಾರಕ್ಕೆ ಚಲಿಸಲು ಕನಿಷ್ಟ ಸಂಖ್ಯೆಯ ಟವರ್‍ಗಳು ಸಾಕು. ಆದರೆ ಅಭಿವೃದ್ಧಿಹೊಂದಿದ 3ಜಿ, 4ಜಿ ಯಂತಹ ಮೌಲ್ಯಯುತ ಸೇವೆಗಳ ಪ್ರಸರಣೆಗೆ 900 ಮೆ.ಹ ಫ್ರಿಕ್ವೆನ್ಸಿಯ ಬ್ಯಾಂಡ್ ನಿಷ್ಪ್ರಯೋಜಕವಾಗುತ್ತದೆ. ಅದಕ್ಕೆ 2100ಕ್ಕಿಂತ ಹೆಚ್ಚಿನ ಫ್ರಿಕ್ವೆನ್ಸಿಯ ಬ್ಯಾಂಡ್ ಅಗತ್ಯವಿರುತ್ತದೆ.

ಬೆಂಗಳೂರು, ಮುಂಬಯಿ, ದೆಹಲಿಯಂತಹ ಮಹಾನಗರಗಳಲ್ಲಿ ಅಗತ್ಯ ಟವರ್‍ಗಳ ಕೊರತೆಯಿದೆ. ಈ ಕೊರತೆಯನ್ನು ನೀಗಿಸಲು 'ಟವರ್‍ಪೂಲಿಂಗ್' ಒಂದು ಉತ್ತಮ ಮತ್ತು ಲಾಭದಾಯಕ ಯೋಜನೆಯಾಗಬಲ್ಲದು. ಆದರೆ ಮೊಬೈಲ್ ಕಂಪೆನಿಗಳು ಭಿನ್ನ ಕಾರಣಗಳಿಂದ ತಮ್ಮ ಟವರ್‍ಗಳನ್ನು ಇತರ ಕಂಪೆನಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಬೆಳೆಯುತ್ತಿರುವ ನಗರಗಳಲ್ಲಿ ಸ್ಥಳಾವಕಾಶದ ಕೊರತೆಯೂ ಇದೆ. ಪರಿಣಾಮ ಕಂಪೆನಿಗಳಿಗೂ, ಪರಿಸರಕ್ಕೂ ನಷ್ಟವುಂಟಾಗುತ್ತದೆ. ಟವರ್‍ಗಳು ನಗರಾಡಳಿತದ ವ್ಯಾಪ್ತಿಗೆ ಬರುತ್ತದೆ. ಟವರ್‍ಗಳ ನಿರ್ವಹಣೆಗೆ ಏಕರೂಪಿ ನಿಯಮವಿಲ್ಲ. ಟವರ್‍ಗಳ ಕೊರತೆಗೆ ಮತ್ತೊಂದು ಸಾಂಸ್ಥಿಕ ಕಾರಣ.

ಇರುವ 13ರಲ್ಲಿ ಅರ್ಧದಷ್ಟು ಕಂಪೆನಿಗಳು ನಷ್ಟದಲ್ಲಿವೆ. ಈ ಕಂಪೆನಿಗಳು ತರಂಗಾಂತರಗಳನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಅಂದಹಾಗೆ ತರಂಗಾಂತರಗಳ ಹರಾಜು ಅದರ ಬೆಲೆಯನ್ನು ತುಟ್ಟಿಯಾಗಿಸಿದೆ. ಸಾಲದಲ್ಲಿರುವ ಕಂಪೆನಿಗಳು ಆ ನಷ್ಟವನ್ನು ಹೇಗಾದರೂ ಮಾಡಿ ಗ್ರಾಹಕರಿಂದಲೇ ಪಡೆಯಲಿವೆ.

ಸರಕಾರದ ನಿಯಂತ್ರಣದಲ್ಲಿರುವ ಬಿಎಸ್‍ಎನ್‍ಎಲ್ ಮತ್ತು ಎಂಟಿಎನ್‍ಎಲ್ ಕಂಪೆನಿಗಳು ಈ ಸಮಸ್ಯೆಗೆ ನಿಯಂತ್ರಣದ ಅಗತ್ಯವಿಲ್ಲ. ಬದಲಾಗಿ ಮೊಬೈಲ್ ಕಂಪೆನಿಗಳೇ ತಮ್ಮ ತಪ್ಪಿನ ಪರಿಹಾರವನ್ನು ಭರಿಸಲಿ, ಇಲ್ಲವಾದಲ್ಲಿ ಚಂದಾದಾರರೇ ಅವರನ್ನು ಪೋರ್ಟಿಂಗ್ ಮೂಲಕ ನಿರಾಕರಿಸುತ್ತಾರೆ. ಅದಕ್ಕಾಗಿ ಹೊಸ ನಿಯಂತ್ರಣ ಕಾನೂನಿನ ಅಗತ್ಯವಿಲ್ಲ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿವೆ. ಇದಕ್ಕೆ ಪೂರಕವೆಂಬಂತೆ ಟೆಲಿನಾರ್ ಆಗಿ ಮಾರ್ಪಾಟಾಗಿರುವ ಯುನಿನಾರ್ ತಮ್ಮ ಚಂದಾದಾರರಿಗೆ ಕರೆ ಕಡಿತದ ನಷ್ಟವನ್ನು ಉಚಿತ ನಿಮಿಷದ ಮೂಲಕ ಭರಿಸುವುದಾಗಿ ತಿಳಿಸಿದೆ. ಸಿಗಬಹುದಾದ ಉಚಿತ ನಿಮಿಷಕ್ಕಾಗಿ ಆಗುವ ಅನಾನುಕೂಲವನ್ನು ಒಪ್ಪಿಕೊಳ್ಳಲು ಪ್ರಜ್ಞಾವಂತರು ಬಯಸುವುದಿಲ್ಲ.

ಆದರೆ ಟ್ರಾಯ್ ಮತ್ತು ಕೇಂದ್ರ ಸರಕಾರ ಮಾತ್ರ ಈ ಸಮಸ್ಯೆಯನ್ನು ಕೊನೆಗಾಣಿಸಲು ಕ್ಷಿಪ್ರವಾಗಿ ಯೋಜನೆಯೊಂದನ್ನು ನಿರೂಪಿಸುವುದರಲ್ಲಿದೆ. ಆದರೆ ಟೆಲಿಕಾಂ ಕಂಪೆನಿಗಳು ಬಯಸುತ್ತಿರುವ ಮೂಲಭೂತ ಸಂಗತಿಗಳಿಗೆ ಸಾಂಸ್ಥಿಕ ಪರಿಹಾರವನ್ನು ರೂಪಿಸದ ಹೊರತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಾಗುವುದಿಲ್ಲ. ಹಾಗಾದಾಗ ಮಾತ್ರ ಮೊಬೈಲ್ ಕಂಪೆನಿಗಳ ಎಲ್ಲಾ ರೀತಿಯ ಉಪಟಳಕ್ಕೂ ಕೊನೆ ಹಾಡಲು ಸಾಧ್ಯ.

ಮುಖ್ಯವಾಗಿ ಕೇಂದ್ರ ಸರಕಾರ ತ್ವರಿತವಾಗಿ ಕರೆ ಕಡಿತದ ರಾಷ್ಟ್ರೀಯ ಡಾಟಾ ಬೇಸ್ ನಿರ್ಮಿಸಬೇಕು. ಇದು ದೋಷಪೂರ್ಣ ಕಂಪೆನಿಗಳ ಲೋಪಗಳನ್ನು ಸರಿಪಡಿಸಿಕೊಳ್ಳಲು ಒತ್ತಾಯಿಸಿದಂತಾಗುತ್ತದೆ. ರಕ್ಷಣಾ ಸೇವೆಯಲ್ಲಿರುವ ತರಾಂತರಗಳನ್ನು ಸಾರ್ವಜನಿಕ ಸೇವೆಗೆ ತೆರವುಗೊಳಿಸಬೇಕು. ಕಂಪೆನಿಗಳಿಗೆ ತರಂಗಾಂತರಗಳನ್ನು ಪರಸ್ಸರ ಹಂಚಿಕೊಳ್ಳಲು ಅವಕಾಶ ನೀಡಬೇಕು. ಇದರಿಂದ ಟೆಲಿಕಾಂ ಕಂಪೆನಿಗಳಿಗೂ ಲಾಭ, ಸರಕಾರದ ಬೊಕ್ಕಸಕ್ಕೂ ನಷ್ಟವಿಲ್ಲ, ಗ್ರಾಹಕರ ಜೇಬಿಗೂ ಕತ್ತರಿ ಬೀಳುವುದಿಲ್ಲ. ಎಲ್ಲಾ ರಾಜ್ಯ ಸರಕಾರಗಳ ಮೂಲಕ ಮೊಬೈಲ್ ಟವರ್‍ಗಳ ನಿರ್ವಹಣೆಗೆ ಏಕರೂಪಿ ನಿಯಮವನ್ನು ಜಾರಿಗೊಳಿಸಬೇಕು. ಕಡಿಮೆಯಿರುವ ಟವರ್‍ಗಳು ಸರಕಾರಿ ಜಾಗಗಳಲ್ಲಿ ಸ್ಥಾಪಿಸಲು ಅವಕಾಶವನ್ನು ನೀಡಬೇಕು. ಆಗಲೇ ಟೆಲಿಕಾಂ ಕಂಪೆನಿಗಳನ್ನೂ ಕಟ್ಟುನಿಟ್ಟಾಗಿ ನಿಯಂತ್ರಿಸಲು ಸಾಧ್ಯ.-ಶ್ರೇಯಾಂಕ ಎಸ್ ರಾನಡೆ.

No comments:

Post a Comment