Saturday, January 30, 2016

BHAG MILKA BHAG: 'Mistake'n Relook. ‘ಭಾಗ್ ಮಿಲ್ಕಾ ಭಾಗ್’- ಮಿಲ್ಕಾ ಸಿಂಗ್ ಮುರಿಯದ ದಾಖಲೆಗೆ, ಸುಳ್ಳು ದಾಖಲೆ ಬರೆದ ಚಿತ್ರ.

‘ಭಾಗ್ ಮಿಲ್ಕಾ ಭಾಗ್’- ಮಿಲ್ಕಾ ಸಿಂಗ್ ಮುರಿಯದ ದಾಖಲೆಗೆ,  ಸುಳ್ಳು ದಾಖಲೆ ಬರೆದ ಚಿತ್ರ. 
(ಈ ಚಿತ್ರದಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ಬಹುದೊಡ್ಡ ಪ್ರಮಾದ ಒಂದಿದೆ. ಅದು ವಿಶ್ವದಾಖಲೆಯ ಬಗ್ಗೆಯೇ ಪ್ರೇಕ್ಷಕರಿಗೆ ತಪ್ಪು ಮಾಹಿತಿಯನ್ನು ನೀಡುವಂತದ್ದು ಮತ್ತು ಮಿಲ್ಕಾನ ಬದುಕಿನ ನಿಜವಾದ ವಿವರಗಳನ್ನು ತಿರುಚುವಂತದ್ದು. ಹಾಗಂತ ಇದು ಬೆಟ್ಟ ಕೊರೆದು ಇಲಿ ಹುಡುಕುವ ಪ್ರಯತ್ನವಲ್ಲ. ರಸದಲ್ಲಿರುವ ಕಸ ಹೆಕ್ಕುವ ಪ್ರಯತ್ನ.)
2013ರ ಅತ್ಯಂತ ಯಶಸ್ವಿ ಚಿತ್ರ ‘ಭಾಗ್ ಮಿಲ್ಕಾ ಭಾಗ್’, ಇದು ಭಾರತೀಯ ಕ್ರೀಡಾ ಕ್ಷೇತ್ರದ ಇತಿಹಾಸದಲ್ಲಿಯೇ ಅತ್ಯಂತ ಹೆಮ್ಮೆಯ ಅಥ್ಲೀಟ್ ಎನ್ನಿಸಿಕೊಂಡಿರುವ ಮಿಲ್ಕಾ ಸಿಂಗ್‍ನ ಕುರಿತಾದ ಹೃದಯಸ್ಪರ್ಶಿ ಚಿತ್ರ. ಚಿತ್ರದ ಪ್ರಾರಂಭದಿಂದಲೂ ಅನೇಕ ಕಾರಣಗಳಿಂದ ಇದು ಸಕಾರಾತ್ಮಕ ಸುದ್ದಿಯಲ್ಲಿತ್ತು. ಆ ಕಾರಣದಿಂದಲೇ ಸಹಜ ಕುತೂಹಲವನ್ನೂ ಸೃಷ್ಟಿಸಿತ್ತು. ಪರಿಣಾಮ ಸಹಜವಾಗಿಯೇ ಚಿತ್ರ ಗೆದ್ದಿದೆ. ಬಾಕ್ಸ್ ಆಫಿಸ್‍ನಲ್ಲಿ ಚಿತ್ರದ ಓಟವನ್ನು ಕಂಡು ಖುದ್ದು ಮಿಲ್ಕಾ ಸಿಂಗ್ ಕೂಡ ದಂಗಾಗಿರಬೇಕು. ಕೇವಲ ಒಂದು ರೂಪಾಯಿ ಗೌರವ ಧನ ಪಡೆದು ತನ್ನ ಬದುಕಿನ ಕಥೆಯನ್ನು ಸಿನಿಮಾ ಮಾಡಲು ಒಪ್ಪಿದ್ದ ಮಿಲ್ಕಾ ಒಂದೆಡೆಯಾದರೆ, ಆ ಭರವಸೆಗೆ ತಣ್ಣೀರೆರೆಚದೆ ನೋಡುಗರ ಎದೆ ರೋಮಾಂಚನಗೊಳ್ಳುವ ಹಾಗೆ ನಿರ್ದೇಶಿಸಿದ ಕೀರ್ತಿ ರಾಕೇಶ್ ಓಂ ಪ್ರಕಾಶ್ ಮೆಹ್ರಾರದ್ದು, ಆ ಪಾತ್ರಕ್ಕೆ ಜೀವತುಂಬಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆಂಬ ಹೆಮ್ಮೆಗೆ ಫರ್ಹಾನ್ ಅಖ್ತರ್ ಪಾತ್ರರಾಗಿದ್ದಾರೆ. ತನ್ನ ಬದುಕಿಗಾಗಿ ಓಡಿದ ಭಾರತದ ಗೌರವಾನ್ವಿತ ಮಿಲ್ಕಾ ಸಿಂಗ್‍ನ ಅತ್ಯಂತ ಸ್ಫೂರ್ತಿಯುತ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಕೇವಲ ಬಾಲಿವುಡ್ ಮಾತ್ರವಲ್ಲ, ಇಡೀ ದೇಶದಾದ್ಯಂತ ಉತ್ತಮ ಸದಭಿರುಚಿಯ ಚಿತ್ರ ಎಂಬ ಮನ್ನಣೆಯನ್ನು ಪಡೆದುಕೊಂಡು ವಿಶ್ವದ ಗಮನವನ್ನೂ ಸೆಳೆಯುವಂತೆ ಮಾಡಿದೆ. ಮಿಲ್ಕಾ ಸಿಂಗ್‍ನ ಕಥೆಯನ್ನು ಭಾವನಾತ್ಮಕವಾಗಿ ಬೆಸೆದುಕೊಟ್ಟಿರುವ ಕಾರಣದಿಂದ ನೋಡಿದವರ ಎದೆಯಲ್ಲಿ ಚಿತ್ರ ಅಚ್ಚಳಿಯದೆ ಉಳಿಯುವಂತೆ ಮಾಡಿದೆ.

ಭಾರತೀಯ ಕ್ರೀಡಾ ಕ್ಷೇತ್ರದ ಸಾಧಕರ ಬಗ್ಗೆ ‘ಪಾನ್ ಸಿಂಗ್ ಥೋಮರ್’ನಂತಹ ಕೆಲವಾರು ಚಿತ್ರಗಳು ಬಾಲಿವುಡ್‍ನಲ್ಲಿ ಬಂದಿವೆ. ಹಾಗೂ ಕ್ರೀಡಾ ಕ್ಷೇತ್ರದ ಕಥಾಹಂದರವನ್ನು ಹೊಂದಿರುವ ಹೃದಯಸ್ಪರ್ಶಿ ತಳಹದಿಯನ್ನು ಹೊಂದಿರುವ ‘ಚಕ್ ದೇ ಇಂಡಿಯಾ’ (ಅಷ್ಟೇನೂ ಯಶಸ್ವಿಯಾಗದ ‘ಗೋಲ್’)ನಂತಹ ಚಿತ್ರಗಳೂ ಬಂದಿವೆ. ಅನೇಕ ವಿಶೇಷ ಸಂಗತಿಗಳಿಂದ ಕೂಡಿದ ‘ಭಾಗ್ ಮಿಲ್ಕಾ ಭಾಗ್’ ಚಿತ್ರ ಕೂಡ ಅದೇ ಸಾಲಿನಲ್ಲಿ ಅಥವಾ ಕಥೆಯು ಅಥ್ಲೀಟ್ ಒಬ್ಬನ ನಿಜ ಜೀವನವನ್ನು ಚಿತ್ರಿಸುವ ಕಾರಣ ಉಳಿದ ಚಿತ್ರಗಳಿಗಿಂತ ಉನ್ನತ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಇಲ್ಲೊಂದು ಸಮಸ್ಯೆಯಿದೆ. ಈ ಚಲನಚಿತ್ರವನ್ನ ತಯಾರಿಸುವವರು, ಮಿಲ್ಕಾ ಸಿಂಗ್‍ನ ಜೀವನವನ್ನು ವಾಸ್ತವಕ್ಕಿಂತ ಹೆಚ್ಚಾಗಿಯೇ ವೈಭವೀಕರಿಸುವ, ಪಾತ್ರವನ್ನು ಭವ್ಯವಾಗಿ ಉದಾತ್ತೀಕರಿಸುವ ಉದ್ದೇಶದ ಕಾರಣದಿಂದ, ಈ ಚಿತ್ರ ಮಿಲ್ಕಾ ಸಿಂಗ್ ಬಗ್ಗೆ ತಪ್ಪಾದ ಮಾಹಿತಿಯನ್ನು ನೀಡಿದೆ. ಆ ಸಣ್ಣದಾದ ಆದರೆ ಗಂಭೀರವಾದ ತಪ್ಪಿನಿಂದಾಗಿ ಮಿಲ್ಕಾ ಸಿಂಗ್ ಜೀವನದ ವಾಸ್ತವತೆಗೆ ಮಾಡಿದ ಅನ್ಯಾಯವೆಂದೇ ಪರಿಗಣಿಸಬೇಕಾಗುತ್ತದೆ.

ಚಲನಚಿತ್ರವೆಂದ ಮೇಲೆ ಅದಕ್ಕೆ ತನ್ನದೇ ಆದ ಸ್ವಾತಂತ್ರ್ಯವಿರುತ್ತದೆ. ವಾಣಿಜ್ಯ ಉದ್ದೇಶದ ಚಲನಚಿತ್ರಗಳು ಕಥೆಯನ್ನು ತಮಗೆ ಬೇಕಾದಂತೆ ಮಾರ್ಪಡಿಸುತ್ತವೆ ಎಂಬುದೂ ನಿಜ. ಆದರೆ ಮಾಡುವ ಅಚಾತುರ್ಯವೊಂದು ಮೂಲ ಕಥೆಗೆ, ಅದರಲ್ಲೂ ನಿಜ ಜೀವನದಲ್ಲಿ ಬದುಕುತ್ತಿರುವ ಅಥ್ಲೀಟ್ ಒಬ್ಬನಿಗೆ ಅವಮಾನಮಾಡಿದಂತಾಗುತ್ತದೆ. ಅಂತಹ ಸೂಕ್ಷ್ಮ ಸಂಗತಿಗಳು ತಿಳಿಯದೇ ಹೋದರೆ ಇಡೀ ಚಲನಚಿತ್ರದ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
‘ಭಾಗ್ ಮಿಲ್ಕಾ’ ಚಿತ್ರದ ತಪ್ಪು:

ಈ ಚಿತ್ರದಲ್ಲಿ ಒಂದು ಸಂದರ್ಭ ಬರುತ್ತದೆ, 1956ರ ಒಲಂಪಿಕ್ಸ್‍ನ ವಿಜಯದ ನಂತರ ಮಿಲ್ಕಾ ಪಾತ್ರಧಾರಿ ಫರ್ಹಾನ್ ಅಖ್ತರ್ ರಾಷ್ಟ್ರೀಯ ಕೋಚ್ ಬಳಿ 400 ಮೀ. ಓಟದಲ್ಲಿ ವಿಶ್ವ ದಾಖಲೆ ಎಷ್ಟೆಂದು ಕೇಳುತ್ತಾನೆ. ಅದಕ್ಕಾತ ಸಿನಿಮೀಯ ರೀತಿಯಲ್ಲಿ ಏನನ್ನೂ ಮಾತನಾಡದೆ ಒಂದು ಪುಟ್ಟ ಕಾಗದದ ಚೂರಿನಲ್ಲಿ ‘45.9 ಸೆಕೆಂಡ್‍ಗಳು’ ಎಂದು ಬರೆದು ಮಿಲ್ಕಾನ ಕೈಗಿಡುತ್ತಾನೆ. ಆ ವಿಶ್ವದಾಖಲೆಯ ಗುರಿಯನ್ನು ಮುರಿಯುವುದೇ ಮಿಲ್ಕಾನ ಅತ್ಯುನ್ನತ ಉದ್ದೇಶವಾಗುತ್ತದೆ. ಅದನ್ನವನು ದೇವರ ಕೆಲಸವೆಂಬಂತೆ ಸ್ವೀಕರಿಸಿ, ಮೌನ ಪ್ರತಿಜ್ಞೆಯನ್ನು ಸ್ವೀಕರಿಸಿದಂತೆ ಪ್ರೇಕ್ಷಕರನ್ನು ನಂಬಿಸುತ್ತಾನೆ.

ನಂತರ 1960ರ ಒಲಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುವ ತಾಲೀಮಿನ ಸಂದರ್ಭದಲ್ಲಿ ‘ಪ್ರಾಕ್ಟೀಸ್ ಸೆಶನ್’ನ(ತಾಲೀಮಿನ) ಓಟದಲ್ಲಿ ಮಿಲ್ಕಾ 45.8ಸೆಕೆಂಡ್‍ಗಳಲ್ಲಿ 400 ಮೀಟರ್ ಓಟವನ್ನು ಪೂರ್ಣಗೊಳಿಸಿ ವಿಶ್ವದಾಖಲೆಯನ್ನು ‘ಅನಧಿಕೃತವಾಗಿ’(ದಾಖಲಾಗದಂತೆ) ಮುರಿಯುತ್ತಾನೆ. ಮಿಲ್ಕಾ ತಂಡದಲ್ಲಿ ಸಂಭ್ರಮ ಒಡಮೂಡುತ್ತದೆ. ಹಾಡು-ಕುಣಿತವೂ ಜೊತೆಗೂಡುತ್ತದೆ. ಸಿನಿಕವಾಗಿ ಕೋಚ್ ಬರೆದುಕೊಟ್ಟಿದ್ದ ಕಾಗದದ ಚೀಟಿಯನ್ನು ಬೆಂಕಿಗೆ ಎಸೆಯುವ ದೃಶ್ಯವೂ ಬರುತ್ತದೆ. ಆಗೆಲ್ಲಾ ಹೆಮ್ಮೆ ಮತ್ತು ಆಸ್ಥೆಯಿಂದ ಪ್ರೇಕ್ಷಕರ ಮೈ ಜುಮ್ಮೆನ್ನುತ್ತದೆ. ಚಪ್ಪಾಳೆಗಳ ಸಾಗರವೇ ಹರಿದುಬರುತ್ತದೆ. ಎಲ್ಲವೂ ಸುಗಮವಾಗಿ ಸಾಗಿದೆ, ಇನ್ನೆಲ್ಲಿಯ ಪ್ರಮಾದ ಎಂದರೆ. ಈ ಚಿತ್ರದಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ಬಹುದೊಡ್ಡ ಪ್ರಮಾದ ಒಂದಿದೆ. ಅದು ವಿಶ್ವದಾಖಲೆಯ ಬಗ್ಗೆಯೇ ಪ್ರೇಕ್ಷಕರಿಗೆ ತಪ್ಪು ಮಾಹಿತಿಯನ್ನು ನೀಡುವಂತದ್ದು ಮತ್ತು ಮಿಲ್ಕಾನ ಬದುಕಿನ ನಿಜವಾದ ವಿವರಗಳನ್ನು ತಿರುಚುವಂತದ್ದು. ಹಾಗಂತ ಇದು ಬೆಟ್ಟ ಕೊರೆದು ಇಲಿ ಹುಡುಕುವ ಪ್ರಯತ್ನವಲ್ಲ. ರಸದಲ್ಲಿರುವ ಕಸ ಹೆಕ್ಕುವ ಪ್ರಯತ್ನ.

ಮೊತ್ತ ಮೊದಲಿಗೆ ಏಳುವ ಪ್ರಶ್ನೆ, ಚಿತ್ರದಲ್ಲಿ ಮಿಲ್ಕಾಸಿಂಗ್‍ನ ಅಮೋಘ ಸಾಧನೆಗೆ ಕಾರಣವಾದ ‘45.9 ಸೆಕೆಂಡ್‍ಗಳು’ ಎಂಬ ಕನಸಿನ ಗುರಿ ನಿಜಕ್ಕೂ ವಿಶ್ವದಾಖಲೆಯಾಗಿತ್ತೇ? ಎಂಬುದು. ಯಾಕೆಂದರೆ ಈ ವಿಶ್ವದಾಖಲೆ ನಿರ್ಮಾಣವಾದದ್ದು 1948ರಲ್ಲಿ. ಆ ಸಂದರ್ಭದಲ್ಲಿ ಮಿಲ್ಕಾ ಒಲಂಪಿಕ್ಸ್‍ನ ಸ್ಪರ್ಧಾರ್ಥಿಯೇ ಆಗಿರಲಿಲ್ಲ. ಇಂಟರ್‍ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್(ಐಎಎಫ್)ನ ದಾಖಲೆಗಳ ಪ್ರಕಾರ ಪುರುಷರ 400ಮೀಟರ್ ಓಟವನ್ನು 45.9ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿದ ವಿಶ್ವದಾಖಲೆ ಹರ್ಬ್ ಮೆಕೆನ್ಲಿ ಹೆಸರಿನಲ್ಲಿದೆ. 1950ರಲ್ಲಿ ಜಾರ್ಜ್ ರೋಡನ್ 400ಮೀಟರ್ ಓಟವನ್ನು 45.8ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಹೊಸ ದಾಖಲೆಯನ್ನು ಬರೆದ. ದಾಖಲೆಗಳಿರುವುದೇ ಮುರಿಯುವುದಕ್ಕಾಗಿ ಎಂಬಂತೆ 1955ರಲ್ಲಿ 45.5ಸೆಕೆಂಡ್‍ಗಳಲ್ಲಿ 400 ಮೀಟರ್ ಓಟವನ್ನು ಪೂರ್ಣಗೊಳಿಸುವ ಮೂಲಕ ಲೂ ಜೋನ್ಸ್ ಎಂಬ ಅಥ್ಲೀಟ್ ಆ ಹಿಂದಿನ ದಾಖಲೆಯನ್ನು ಮುರಿದ. ಅವನದ್ದೇ ದಾಖಲೆಯನ್ನು 1956 ಅವನೇ ಮುರಿದು ಹೊಸ ಅಧ್ಯಾಯ ಬರೆದ. ಆಗ ಆತ ತನ್ನ ಗುರಿಯನ್ನು ಮುಟ್ಟಲು ತೆಗೆದುಕೊಂಡ ಸಮಯ ಕೇವಲ 45.2 ಸೆಕೆಂಡ್‍ಗಳು.

ಈ ಎಲ್ಲಾ ಸರಳ ಮಾಹಿತಿಗಳನ್ನು ಆಧರಿಸಿ ಹೇಳುವುದಾದರೆ ಚಲನಚಿತ್ರದಲ್ಲಿ ಕೋಚ್ ಮಿಲ್ಕಾ ಸಿಂಗ್‍ಗೆ ನೀಡುವ ಮಾಹಿತಿ ತಪ್ಪು. ಅದು ವಿಶ್ವದಾಖಲೆಯ ಬಗೆಗಿನ ಪೂರ್ಣ 0.7ಸೆಕೆಂಡ್‍ಗಳ ಅಂತರದ ತಪ್ಪು. ರನ್ನಿಂಗ್ ರೇಸ್‍ನ ಪರಿಭಾಷೆಯಲ್ಲಿ, ಓಟವನ್ನು ಪ್ರಾರಂಭಿಸದ ಇನೀಶಿಯೆಟ್ ಆಗದ ಓಟಗಾರರಿಗೆ ಅದು ‘ಮಿಲೆನಿಯಮ್’ ಅವಧಿ. ಅದು ಅಲ್ಲಿಗೆ ನಿಲ್ಲುವುದಿಲ್ಲ. ಚಿತ್ರದ ಕೊನೆಯಲ್ಲಿ 1960ರ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಮಿಲ್ಕಾಸಿಂಗ್ 400ಮೀಟರ್ ರೇಸನ್ನು 45.8 ಸೆಕೆಂಡ್‍ಗಳಲ್ಲಿ ಕ್ರಮಿಸಿ ಅಲಿಖಿತವಾಗಿ ಹೊಸದಾಖಲೆಯನ್ನು ಬರೆದಂತೆ ತೋರಿಸಲಾಗಿದೆ. ಇದು ಚಾರಿತ್ರಿಕವಾದ ಪ್ರಮಾದ. ಅಸತ್ಯ ಮಾಹಿತಿಯಿಂದ ಪ್ರೇಕ್ಷಕರನ್ನು ಮತ್ತು ಸಮಾಜವನ್ನು ದಾರಿತಪ್ಪಿಸುವ ತಿಳಿಕೇಡಿತನ ಎಂದರೆ ತಪ್ಪಾಗಲಾರದು. ಚಿತ್ರದ ನಿರ್ದೇಶಕರನ್ನೂ ಒಳಗೊಂಡಂತೆ ಚಿತ್ರಕತೆ ನಿರ್ಮಾಣದ ಸಂದರ್ಭದಲ್ಲಿ ತೊಡಗಿಸಿಕೊಂಡ ಯಾರೊಬ್ಬರಿಗೂ ಅದಾಗಲೇ ಗತಿಸಿಹೋದ, ಯಾರದೋ ಹೆಸರಿನಲ್ಲಿರುವ ವಿಶ್ವದಾಖಲೆ ಗೋಚರಿಸಲೇ ಇಲ್ಲವೆ? ಕೋಚ್ ನೀಡುವ ‘45.9ಸೆಕೆಂಡ್‍ಗಳು’ ಎಂಬ ಅಸಂಬದ್ಧ ಗುರಿ ಹನ್ನೆರಡು ವರ್ಷಗಳ ಹಿಂದಿನದ್ದು ಮತ್ತು ಈ ವಿಚಾರ ಯಾರೊಬ್ಬರ ಅರಿವಿಗೂ ಬಾರದಿರುವುದು ನಿಜಕ್ಕೂ ಸೋಜಿಗದ-ಅಚ್ಚರಿಯ ಸಂಗತಿ.
ಚಿತ್ರಜಗತ್ತಿನ ಮಾಯಾಲೋಕದಲ್ಲಿ ಪ್ರೇಕ್ಷಕರಿಗೆ ಮನೋರಂಜನೆ ಎಂಬ ನೆಪವೊಡ್ಡಿ ಅದೆಷ್ಟೋ ನಿಜವಾದ ಮಾಹಿತಿಗಳನ್ನು, ದಾಖಲೆಗಳನ್ನು ತಮಗೆ ಬೇಕಾದಂತೆ ತಿರುಚಿ ಹಾಕುವುದು ನೀರು ಕುಡಿದಷ್ಟೇ ಸುಲಭವಾಗಿ ಬಿಟ್ಟಿದೆ. ಅದಕ್ಕೆ ಸಾಕಷ್ಟು ಸಬೂಬುಗಳೂ ತಯಾರಿರುತ್ತವೆ. ಆದರೆ ಪ್ರಾಯಶಃ ‘ಭಾಗ್ ಮಿಲ್ಕಾ ಭಾಗ್’ ಚಿತ್ರ ಬಾಲಿವುಡ್‍ನ ಇತರ ಮೆಲೋಡ್ರಾಮ ಚಿತ್ರಗಳಿಗಿಂತ ಭಿನ್ನವಾಗಿದೆ. ಅದೇ ಕಾರಣಕ್ಕಾಗಿ ಇದು ತೆರಿಗೆ ವಿನಾಯತಿಯನ್ನು ಪಡೆದಿತ್ತು. ಅದಕ್ಕಿಂತಲೂ ಮುಖ್ಯವಾಗಿ ಇದು ಭಾರತದ ಬಹು ಹೆಮ್ಮೆಯ ಸಾಧಕ ಮಿಲ್ಕಾ ಸಿಂಗ್‍ನ ನಿಜವಾದ ಜೀವನ ಕಥನ. ಅದನ್ನು ಸ್ವಲ್ಪವೂ ತಿರುಚದಂತೆ ಚಿತ್ರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಇಂತಹ ಉತ್ತಮ ಪ್ರಯೋಗಳು ಜನರಿಗೆ ಅತ್ಯಂತ ಪ್ರಾಥಮಿಕ ಮಾಹಿತಿ-ಸಂಗತಿಯೊಂದನ್ನು ತಪ್ಪಾಗಿ ನೀಡುವ ಮೂಲಕ ಸೋಲುತ್ತವೆ. ಮತ್ತು ಜನರ ನಂಬಿಕೆಗಳನ್ನು ಘಾಸಿಗೊಳಿಸುತ್ತವೆ. ಇಂತಹ ಸಣ್ಣ ಆದರೆ ಪ್ರಧಾನ ದೋಷ ಪ್ರೇಕ್ಷಕರನ್ನು ಮೂರ್ಖರನ್ನಾಗಿಸುವ ಕ್ರಿಯೆಯಾಗಿದೆ. ಇದು ನಿಜವಾಗಿಯೂ ಮಿಲ್ಕಾ ಸಿಂಗ್‍ಗೆ ಮಾಡಿದ ನೇರ ಅವಮಾನ.

ಮಿಲ್ಕಾ ನಮ್ಮ ದೇಶದ ಬಹು ವಿಖ್ಯಾತ ಕ್ರೀಡಾ ಪಟು, ಆತ ಲಿಖಿತವಾಗಿ ಅಥವಾ ಅಲಿಖಿತವಾಗಿ 400ಮೀಟರ್ ರೇಸ್‍ನಲ್ಲಿ ಹಿಂದಿನ ಯಾವುದೇ ವಿಶ್ವದಾಖಲೆಯನ್ನು ಮುರಿದಿಲ್ಲ ಎಂಬುದು ಚಿತ್ರವನ್ನು ನೋಡಿದವರೂ, ನೋಡದವರೂ ತಿಳಿಯಬೇಕು. ಇಂತಹ ದೊಡ್ಡ ಪ್ರಮಾದ ಬಿ-ಟೌನ್‍ನ ಮಾಧ್ಯಮಗಳಲ್ಲಿ ಸುದ್ದಿಯಾಗದಿರುವುದು ಅವುಗಳ ಕಾರ್ಯವೈಖರಿಯ ದ್ಯೋತಕ.
ನಿಖರತೆಯ ಮೂಲಾಂಶ ನಾಪತ್ತೆಯಾಗಿದ್ದರೂ, ಆ ಅಂಶವನ್ನು ಮನ್ನಿಸಿದರೆ ಸಾಧಕ ಅಥ್ಲೀಟ್ ಒಬ್ಬನ ಜೀವನವನ್ನು ಹೆಮ್ಮೆಯಾಗುವಂತೆ ಚಿತ್ರಿಸಿದ ‘ಭಾಗ್ ಮಿಲ್ಕಾ ಭಾಗ್’ ಚಿತ್ರದ ಪ್ರಯತ್ನ ಮತ್ತು ಸಾಧನೆಯನ್ನು ಮೆಚ್ಚಲೇಬೇಕು. ಅಭಿನಂದಿಸಬೇಕು.
--------

-ಶ್ರೇಯಾಂಕ ಎಸ್. ರಾನಡೆ,

No comments:

Post a Comment