Saturday, January 30, 2016

Journey on the Road: Pathways to Road Safety. ರಸ್ತೆಯಲ್ಲಿ ನಾವೂ, ನೀವೂ.

ರಸ್ತೆಯಲ್ಲಿ ನಾವೂ, ನೀವೂ.


Traffic rules are terrific if you follow, terrible if you break!ಮಹಾನಗರಗಳಲ್ಲಿ ಜನರ ಬಳಿ ವಾಹನಗಳಿರುತ್ತವೆ. ಆದರೆ ಕನಿಷ್ಟ ವ್ಯವಧಾನವೂ ಇರುವುದಿಲ್ಲ, ಟ್ರಾಫಿಕ್ ಸಮಸ್ಯೆಯ ಬಗ್ಗೆ, ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಕನಿಷ್ಟ ಜ್ಞಾನವೂ ಇಲ್ಲದವರಂತೆ ವರ್ತಿಸುವುದೂ ಇದೆ. ಇದಕ್ಕೆಲ್ಲ ಸಂಚಾರ ವ್ಯವಸ್ಥೆ, ನಿಯಮಗಳ ಬಗೆಗಿನ ಅಸಡ್ಡೆಯೇ ಕಾರಣ. ತಾವು ಮಾತ್ರ ಸುಲಭವಾಗಿ, ವೇಗವಾಗಿ ಹೋಗಬೇಕು ಎಂಬ ಸಂಕುಚಿತ ಮನಸ್ಥಿತಿಯೂ ಟ್ರಾಫಿಕ್ ಜಾಮ್, ಪಾರ್ಕಿಂಗ್ ಅವ್ಯವಸ್ಥೆಯನ್ನು ಪೋಷಿಸುತ್ತದೆ.

ಪಾರ್ಕಿಂಗ್‍ಗೆಂದು ನಿಗದಿತವಾದ ವ್ಯವಸ್ಥೆ ಮಾಡಲಾಗಿದ್ದರೂ ಅಡ್ಡದಿಡ್ಡಿಯಾಗಿ ವಾಹನವನ್ನು ನಿಲ್ಲಿಸಲಾಗುತ್ತದೆ. ವಾಣಿಜ್ಯ ಕಟ್ಟಡಗಳ ಹೊರಗೆ ಮೀಸಲಾದ ಸ್ಥಳಕ್ಕಿಂತಲೂ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಳ್ಳುವುದು ಒಂದು ಕಿರಿಕಿರಿಯಾದರೆ, ನಿಲ್ಲಿಸಿದ ವಾಹನದ ಹಿಂಬದಿಯೋ, ಮುಂಬದಿಯೋ ಮತ್ತೊಂದು ವಾಹನವನ್ನು ಅಡ್ಡವಾಗಿ ನಿಲ್ಲಿಸಿ ಮೊದಲ ವಾಹನವನ್ನೂ ತೆಗೆಯದಂತೆ ಮಾಡಿಬಿಡುವುದು ವಾಹನ ಸವಾರರಿಗೆ ಸಾಮಾನ್ಯವಾಗಿ ಎದುರಾಗುವ ಪಾರ್ಕಿಂಗ್ ಸಮಸ್ಯೆ. ಬೃಹತ್ ಸಂಖ್ಯೆಯ ವಾಹನಗಳಿದ್ದರಂತೂ ಅದರಲ್ಲಿ ಸಿಲುಕದೆ ಹೊರಬಂದವರು ಉಸ್ಸೆಂದು ಯಾವುದೋ ಯುದ್ಧ ಗೆದ್ದಂತೆ ನಿಟ್ಟುಸಿರು ಬಿಡುತ್ತಾರೆ.

ಪಥ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿರುತ್ತವೆ. ಯಾವುದೋ ವಾಹನವೊಂದು ಮಧ್ಯದಲ್ಲಿ ಅಡ್ಡಾದಿಡ್ಡಿಯಾಗಿ ಪಥವನ್ನು ಬದಲಿಸುತ್ತದೆ. ಆ ವಾಹನವನ್ನು ನಿರೀಕ್ಷಿಸದಿದ್ದ ಕಾರಣ ತ್ವರಿತವಾಗಿ ಬ್ರೇಕ್ ಹಾಕಿದರೆ ಹಿಂದಿರುವ ವಾಹನಗಳ ಫಜೀತಿ ಖಂಡಿತ. ಎದುರಿರುವ ವಾಹನಕ್ಕೆ ಢಿಕ್ಕಿ ಹೊಡೆಯದಿದ್ದರೆ ಅದೇ ಅವರ ಪುಣ್ಯ. ವಾಹನ ಸಂಚರಿಸುತ್ತಿರುವಾಗ ಎಲ್ಲೋ ಒಂದೆಡೆ ನಿಲ್ಲಿಸಿಬಿಡುವುದು, ಅಪರಿಚಿತವಾದ ಹೊಸ ಪ್ರದೇಶವೊಂದರಲ್ಲಿ ಸಂಚರಿಸುವಾಗ ಪದೇ ಪದೇ ರಸ್ತೆ, ವಿಳಾಸ ಕೇಳುವ ಸಲುವಾಗಿ ವಾಹನವನ್ನು ಅಲ್ಲಲ್ಲಿ ನಿಲ್ಲಿಸುವುದು ಹಿಂದೆಯೇ ಬರುತ್ತಿರುವವರಿಗೆ ದೊಡ್ಡ ಗೋಳು. ವೇಗಮಿತಿಯ ಅರಿವಿದ್ದೂ ಅತಿವೇಗವಾಗಿ ವಾಹನ ಚಲಾಯಿಸುವವರು, ಸಿಗ್ನಲ್ ಮುರಿಯುವವರು, ಆಂಬ್ಯುಲೆನ್ಸ್‍ನ ಅನಿವಾರ್ಯತೆ ಗೊತ್ತಿದ್ದೂ ಅದಕ್ಕಾಗಿ ಸ್ಥಳವಾಕಾಶ ಮಾಡಿಕೊಡದೆ ತಮ್ಮ ಸರದಿಯಲ್ಲಿಯೇ ಮುಂದುವರೆಯುವವರು, ತಾವೂ ಮುಂದೆ ಹೋಗದೆ ಹಿಂದಿನವರಿಗೂ ಹೋಗಲು ಬಿಡದ ವಿಘ್ನ ಸಂತೋಷಿಗಳು. ಅನೇಕ ರಸ್ತೆಗಳು ತೀರಾ ಸಣ್ಣದಾಗಿದ್ದರೂ ಶಾರ್ಟ್‍ಕಟ್ ಆದ ಕಾರಣ ಬೃಹತ್ ವಾಹನವನ್ನೂ ಕೊಂಡೊಯ್ಯುವ ಕಾರಣ ರಸ್ತೆಯ ಸಂಚಾರವೇ ತಟಸ್ಥಗೊಳ್ಳುತ್ತದೆ.

ಪಾದಾಚಾರಿಗಳು ತಮಗೆ ಮೀಸರಿಸಿದ ಮಾರ್ಗದಲ್ಲಿ ಅದು ದೀರ್ಘವೆಂಬ ಕಾರಣಕ್ಕೋ ಅಥವಾ ಫುಟ್‍ಪಾಥ್‍ನ ತುಂಬೆಲ್ಲಾ ಅಂಗಡಿ ಮುಂಗಟ್ಟು, ತಾತ್ಕಾಲಿಕ ವ್ಯಾಪಾರ ವಹಿವಾಟು ಆಕ್ರಮಿಸಿಕೊಂಡಾಗ ರಸ್ತೆಯ ಮೇಲೆ ಸಂಚರಿಸಲು ಪ್ರಾರಂಭಿಸುತ್ತಾರೆ. ಪರಿಣಾಮ ಟ್ರಾಫಿಕ್ ದಟ್ಟನೆ. ಸಿಗ್ನಲ್ ಪಾದಾಚಾರಿಗಳಿಗೆ ಮುಕ್ತವಾಗಿಲ್ಲದಿದ್ದರೂ ನಡುವೆಯೇ ನುಗ್ಗುವುದು, ಝೀಬ್ರಾ ಕ್ರಾಸಿಂಗ್ ಅನ್ನು ಅಲಕ್ಷಿಸುವುದು ಅಪಘಾತಗಳಿಗೂ ಕಾರಣವಾಗುತ್ತದೆ.

ಇವು ಕೇವಲ ಬಿಡಿ ಚಿತ್ರಗಳಷ್ಟೆ. ಇಂತಹ ಅದೆಷ್ಟೋ ಘಟನೆಗಳು, ಸಂಗತಿಗಳು ದಿನನಿತ್ಯವೂ ಅನುಭವಕ್ಕೆ ಬರುತ್ತವೆ. ಆಗೆಲ್ಲ ವಿದೇಶಗಳ ವ್ಯವಸ್ಥೆ, ಅಲ್ಲಿನ ಜನರ ಸಹಕಾರವನ್ನಷ್ಟೇ ನೆನೆದು ಉಗುರುಕಚ್ಚಿಕೊಂಡು ತೃಪ್ತಿ ಕಾಣಬೇಕು. ಇಲ್ಲಿ ಬೇಕಾಗಿರುವುದು ಮಹಾ ತ್ಯಾಗ, ಬಲಿದಾನಗಳಲ್ಲ. ನಿಯಮಗಳನ್ನು ಪಾಲಿಸುವ ಕನಿಷ್ಟ ಸೌಜನ್ಯ, ಮನೋಸಹಜ ತಾಳ್ಮೆ ಮತ್ತು ಎಲ್ಲರಲ್ಲೂ ತೀರಾ ಕಾಮನ್ ಆಗಿರಬೇಕಾದ ಕಾಮನ್‍ಸೆನ್ಸ್. ಇಲ್ಲದಿದ್ದರೆ ಅದು ನ್ಯೂಸೆನ್ಸ್ ಆಗುತ್ತದೆ. ವ್ಯವಸ್ಥೆಯನ್ನು ಹೀಗಳೆಯುವವರು ಅವರೂ ಅದೇ ವ್ಯವಸ್ಥೆಯ ಭಾಗವೆಂಬುದನ್ನು ಮರೆತಿರುತ್ತಾರೆ. ಇದು ಅರಿವಾಗದ ಹೊರತು ಯಾರಿಂದಲೂ ಸಂಚಾರ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಲು ಅಸಾಧ್ಯ. ಮನಸ್ಸು ಸಣ್ಣದಾಗಿದ್ದರೆ ಎಷ್ಟೇ ದೊಡ್ಡ ವಾಹನವಿದ್ದರೂ ಪ್ರಯೋಜನವಿಲ್ಲ. ರಸ್ತೆಯಲ್ಲಿ ಸಂಚರಿಸುವ ನಾವು, ನೀವೂ ಈ ಮೇಲಿನ ಯಾವ ಗುಂಪಿಗೆ ಸೇರುತ್ತೇವೆ ಎಂಬುದನ್ನು ಅರಿತು ಅದರಿಂದ ಹೊರಬರಬೇಕು. ಅದೇ ನಮ್ಮೆಲ್ಲರ ಸುರಕ್ಷತೆ, ನೆಮ್ಮದಿಗೆ ಸುಗಮ ದಾರಿ.-ಶ್ರೇಯಾಂಕ ಎಸ್ ರಾನಡೆ.

No comments:

Post a Comment