Saturday, January 30, 2016

Wallpaper From Heart to Wall. ‘ಬಿತ್ತಿ’ ಪತ್ರಿಕೆಗಳು- ವಿದ್ಯಾರ್ಥಿಗಳ ಅಭಿವ್ಯಕ್ತಿಗೊಂದು ಸೃಜನಶೀಲ ಮಾಧ್ಯಮ.

‘ಬಿತ್ತಿ’ ಪತ್ರಿಕೆಗಳು- ವಿದ್ಯಾರ್ಥಿಗಳ ಅಭಿವ್ಯಕ್ತಿಗೊಂದು ಸೃಜನಶೀಲ ಮಾಧ್ಯಮ:


ಇಲ್ಲಿ ವಿದ್ಯಾರ್ಥಿಗಳೇ ಸಂಪಾದಕರು, ವರದಿಗಾರರು, ಬರಹಗಾರರು, ಅಂಕಣಕಾರರು.. ಇದು ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿಯೇ ನಡೆಸುವ ‘ಬಿತ್ತಿ’ ಪತ್ರಿಕೆ. ಇಂದಿನ ಆಧುನಿಕ ಕಾಲದ ಮಾಧ್ಯಮಗಳಿಂಗಿತ ಬಹು ಪ್ರಾಚೀನ ಮತ್ತು ಮುದ್ರಣ ಮಾಧ್ಯಮಕ್ಕೂ ಮೂಲ ಧಾತು. ಕಾಗದಗಳ ಆವಿಷ್ಕಾರದ ಕಾಲದಿಂದಲೇ ‘ಬಿತ್ತಿ’ ಪತ್ರಿಕೆಗಳ ಉಗಮವನ್ನು ಗುರುತಿಸಬಹುದು.


ಕನ್ನಡದ, ದೇಶz,À ಅಷ್ಟೇ ಏಕೆ ಜಾಗತಿಕ ಮಟ್ಟದಲ್ಲಿಯೂ ಅನೇಕ ಉತ್ತಮ ಬರಹಗಾರರು, ಸಾಹಿತಿಗಳು ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದ್ದು ತಮ್ಮ ಶಾಲಾ-ಕಾಲೇಜು ದಿನಗಳಲ್ಲಿ. ಅವರಲ್ಲಿ ಬರವಣಿಗೆಯ ಆಸಕ್ತಿ ಮತ್ತು ಆ ಬಗೆಯ ಸೃಜನಶೀಲತೆಗೆ ಪ್ರೇರೇಪಿಸಿದ್ದು ವಿದ್ಯಾರ್ಥಿ ಜೀವನದ ದೆಸೆಯಲ್ಲಿ ಅವರು ರೂಪಿಸುತ್ತಿದ್ದ ಗೋಡೆ ಪತ್ರಿಕೆಗಳಿಂದ. ಅನೇಕರಿಗೆ ಅವರ ಮಹೋನ್ನತ ಚಿಂತನೆಗಳಿಗೆ ಸ್ಫೂರ್ತಿ ನೀಡಿದ್ದು ಗೋಡೆ ಪತ್ರಿಕೆಗಳು. ಅದಕ್ಕೆ ಒಂದು ಉತ್ತಮ ಉದಾಹರಣೆ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಲೇಖಕರಾದ ಪ್ರೊ. ಯು.ಆರ್. ಅನಂತಮೂರ್ತಿ. ಅವರು ತಮ್ಮ ಬಾಲ್ಯ ಕಾಲದಲ್ಲಿ, ತಾವು ವಾಸಿಸುತ್ತಿದ್ದ ಅಗ್ರಹಾರದಲ್ಲಿಯೇ ಕನ್ನಡ-ಇಂಗ್ಲೀಷ್ ದ್ವಿಭಾಷೆಯ ಗೋಡೆ ಪತ್ರಿಕೆಗಳನ್ನು ಹೊರತುತ್ತಿದ್ದರು. ಅದೇ ಅವರನ್ನು ಮುಂದೆ ಉತ್ತಮ ಬರಹಗಾರರನ್ನಾಗಿ, ಚಿಂತಕರನ್ನಾಗಿ ರೂಪಿಸಿದ್ದನ್ನು ಅವರೇ ಹೇಳಿಕೊಂಡಿದ್ದಾರೆ. ಅದು ಕೇವಲ ಅವರೊಬ್ಬರ ಅನುಭವವಲ್ಲ, ಅನೇಕ ಸೃಜನಶೀಲ ಬರಹಗಾರರ ಅನುಭವವೂ ಹೌದು.
ವಿದ್ಯಾರ್ಥಿ ಜೀವನದ ಅವಿಸ್ಮರಣೀಯ ಸಂಗತಿಗಳಲ್ಲಿ ಕ್ಯಾಂಪಸ್ ಸುತ್ತುವುದು, ಅಥವಾ ಅನೇಕ ಕಾರಣಗಳಿಗಾಗಿ, ಕೆಲವೊಮ್ಮೆ ವಿನಾಕಾರಣ ರೌಂಡ್ಸ್ ಹೊಡೆಯುವುದೂ ಒಂದು. ಈ ರೌಂಡಪ್ ಅನೇಕರ ರೆಗ್ಯುಲರ್ ರೂಟಿನ್. ಹಲವರಿಗೆ ಅಲಿಖಿತ ನಿಯಮ. ಈ ರೌಂಡಪ್ ನಲ್ಲಿ ಕೇವಲ ಬಣ್ಣ ಬಣ್ಣದ ಚಿತ್ತಾರಗಳು ಮಾತ್ರ ಕಾಣಿಸುವುದಿಲ್ಲ. ತಮ್ಮ ಕಣ್ಣನ್ನು ಸುತ್ತಮುತ್ತಲ ಗೋಡೆಗಳತ್ತ ಹಾಯಿಸಿದರೆ ವರ್ಣರಂಜಿತ ಭಿತ್ತಿಯ ನಡುವೆ ಅದೆಷ್ಟೋ ಸಂಗತಿಗಳು ಅಡಗಿರುತ್ತವೆ. ಅದುವೇ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿಯೇ ರೂಪುಗೊಂಡ ಸೃಜನಶೀಲ ಗೋಡೆ ಪತ್ರಿಕೆಗಳು.
ನೀವು ಯಾವುದೇ ವಿಭಾಗದವರಾಗಿದ್ದರೂ ವಿಭಾಗದ ಹಂಗಿಲ್ಲದೆ ಜ್ಞಾನಾರ್ಜನೆಯ ಕಾಳಜಿಯುಳ್ಳವರಾಗಿದ್ದರೆ, ನಿಮ್ಮ ತಲೆಗೆ ತುಂಬಿಸಿಕೊಳ್ಳಲು ಅನೇಕ ಸಂಗತಿಗಳು ಕಾದು ಕುಳಿತಿರುತ್ತವೆ. ಅವನ್ನು ಬಾಚಿಕೊಳ್ಳಲು ಬಿತ್ತಿ ಪತ್ರಿಕೆಗಳು ನಿಜಕ್ಕೂ ನೆರವಾಗುತ್ತವೆ. ಅದರಲ್ಲಿಯೂ ನಿಮಗೆ ಬೇಕಾದ್ದನ್ನು ಆಯ್ದುಕೊಳ್ಳುವುದು ಜಾಣತನ.
ಕಾಲೇಜು ಬದುಕಿನಲ್ಲಿ ನಿಮ್ಮ ಆವರಣದ ಗೋಡೆ ಪತ್ರಿಕೆಗಳ ಮೇಲೆ ಕಣ್ಣಾಯಿಸುತ್ತಾ, ಮುಖ್ಯವೆನಿಸಿದ್ದನ್ನು, ಕುತೂಹಲಕಾರಿ ಎನ್ನಿಸಿದ್ದನ್ನು ಟಿಪ್ಪಣಿ ಮಾಡಿಟ್ಟುಕೊಂಡಿದ್ದರೆ, ನಿಮ್ಮ ಸುತ್ತಮುತ್ತಲ ಅನೇಕ ಸಂಗತಿಗಳಿಗೆ ನೀವು ‘ಗೂಗಲ್’ನ ಮೊರೆ ಹೋಗಬೇಕಾದ ಅವಶ್ಯಕತೆಯಿರುವುದಿಲ್ಲ. ಯಾಕೆಂದರೆ ಗೋಡೆ ಪತ್ರಿಕೆಗಳಿಂದ ರೂಪುಗೊಂಡ ಕೈಪಿಡಿಯೊಂದು ನಿಮ್ಮ ಕೈಯಲ್ಲಿರುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ನಿಮ್ಮೊಳಗೊಬ್ಬ ಓದುಗ ರೂಪುಗೊಂಡಿರುತ್ತಾನೆ. ಜೊತೆಗೆ ಯಾವುದು ಮುಖ್ಯ ಯಾವುದು ಅಮುಖ್ಯ ಎಂಬುದನ್ನು ನಿರ್ಧರಿಸುವ ಶಕ್ತಿಯೂ ಒದಗುತ್ತದೆ. ಅಲ್ಲಿಂದ ಪಡೆದ ಅನುಭವದ ಫಲವಾಗಿ ಅದು ನಿಮ್ಮನ್ನು ತಿಳಿದೋ ತಿಳಿಯದೆಯೋ ಮುನ್ನಡೆಸುವ ಕಾರ್ಯವನ್ನೂ ಮಾಡುತ್ತಿರುತ್ತದೆ. ಮುಂದಿನ ದಿನಗಳಲ್ಲಿ ಎದುರಿಸುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಮಗದು ಸಹಕಾರಿಯೂ ಆಗುತ್ತದೆ.
ಶಾಲಾ ಕಾಲೇಜುಗಳಲ್ಲಿ ಗೋಡೆ/ಬಿತ್ತಿ ಪತ್ರಿಕೆಗಳ ಪಾತ್ರ ಬಹಳ ಪ್ರಮುಖವಾದದ್ದು. ಅದು ಒಂದೆಡೆ ವಿದ್ಯಾರ್ಥಿಗಳಿಗೆ ಅಭಿವ್ಯಕ್ತಿಯ ಉತ್ತಮ ಮಾಧ್ಯಮವಾಗವುದರ ಜೊತೆಗೆ ವಿದ್ಯಾರ್ಥಿ ದೆಸೆಯಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಬರವಣಿಗೆಗೆ ಎಲ್ಲರನ್ನೂ, ಎಲ್ಲವನ್ನೂ ಸೆಳೆಯುವ ಶಕ್ತಿಯಿದೆ ಎಂಬುದು ತಿಳಿಯದಿರುವ ಸಂಗತಿಯಲ್ಲ.
ಕೆಲವು ಸದಸ್ಯರು ಗುಂಪಿನಲ್ಲಿ ಒಟ್ಟಾಗಿ, ಒಂದು ತಂಡವಾಗಿ ಕಾರ್ಯನಿರ್ವಹಿಸುವುದರಿಂದ ಈ ಬಿತ್ತಿ ಪತ್ರಿಕೆಗಳಿಗೆ ಅನನ್ಯತೆಯ ಮೆರುಗಿನ ಜೊತೆಗೆ ಅಂದವೂ ಒದಗುತ್ತದೆ. ಆ ತಂಡಕ್ಕೊಂದು ತಂಡವಾಗಿ ಕಾರ್ಯನಿರ್ವಹಿಸುವ ಕಲೆ-ಸಾಮಥ್ರ್ಯ ಪ್ರಾಪ್ತವಾಗುತ್ತದೆ. ಇದು ವ್ಯಕ್ತಿತ್ವ ವಿಕಸನಕ್ಕೊಂದು ಉತ್ತಮ ದಾರಿಯಾಗಬಲ್ಲದು. ಅದು ಮುಂದಿನ ಪೀಳಿಗೆಗೆ ಅನೇಕ ನವ ಬರಹಗಾರರನ್ನು, ಸಮಾನ ಮನಸ್ಕ ಚಿಂತಕರನ್ನು ರೂಪಿಸುತ್ತದೆ.
ಗೋಡೆಪತ್ರಿಕೆಗಳನ್ನು ರೂಪುಗೊಳಿಸುವುದು ಒಂದು ಕಲೆ. ನಿರ್ದಿಷ್ಟ ಚೌಕಟ್ಟಿನೊಳಗೆ ಆಯ್ದುಕೊಂಡ ವಸ್ತು ಸಂಗತಿಗಳನ್ನು, ಭಿತ್ತಿ/ಬಿತ್ತಿ ಪತ್ರಿಕೆಗಳ ಉದ್ದೇಶಕ್ಕೆ ತಕ್ಕಂತೆ ಮಾರ್ಪಡಿಸುವುದು ವಿದ್ಯಾರ್ಥಿಗಳ ಪ್ರತಿಭಾಶಕ್ತಿಯ ಅನಾವರಣಕ್ಕೊಂದು ದಾರಿ. ಹಾಗೆಂದು ತೋಚಿದ್ದನ್ನು ಗೀಚುವುದೇ ಇದರ ಕೆಲಸವಾಗಬಾರದು. ನಾಲ್ಕಾರು ಜನ ಇದನ್ನು ಓದುತ್ತಾರೆ, ನೋಡುತ್ತಾರೆ ಎಂಬುದನ್ನು ಅರಿತು ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಅದನ್ನು ರೂಪುಗೊಳಿಸಬೇಕು. ಯಾಕೆಂದರೆ ಇವು ಕೇವಲ ನಿರ್ದಿಷ್ಟ ತಂಡಗಳ ಮುಖವಾಣಿ ಅಲ್ಲ. ಇದು ವಿಭಾಗವೊಂದರ/ಕಾಲೇಜೊಂದರÀ ಪ್ರತಿಬಿಂಬ. ವಿಭಾಗ(ಕಾಲೇಜು)ವೊಂದು ಹೇಗೆ ಆಸಕ್ತಿಯಿಂದ ಕೆಲಸ ನಿರ್ವಹಿಸುತ್ತಿದೆ ಎಂಬುದನ್ನು ಇದರಿಂದ ಅರಿಯಲು ಸಾಧ್ಯ. ಇವುಗಳ ಬೆಳವಣಿಗೆಗಳಲ್ಲಿ ವಿಭಾಗದ, ಶಿಕ್ಷಣ ಸಂಸ್ಥೆಗಳ ಸಕ್ರಿಯ ಪ್ರೋತ್ಸಾಹಕ ಪಾತ್ರವೂ ಅತ್ಯಗತ್ಯ. ಹಾಗಾಗಿ ಈ ಬಿತ್ತಿ/ಭಿತ್ತಿ ಪತ್ರಿಕೆಗಳು ಕೇವಲ ನಿಮ್ಮ ಸ್ವತ್ತಲ್ಲ, ಬದಲಾಗಿ ಇಡೀ ವಿಭಾಗ-ಸಂಸ್ಥೆಯ ಪ್ರತಿನಿಧಿ ಎಂಬುದನ್ನು ಎಂದಿಗೂ ಮರೆಯದಿರಿ.
ಬಿತ್ತಿ ಪತ್ರಿಕೆಗಳಿಗೆ ಇತರ ಪತ್ರಿಕಾ ಮಾಧ್ಯಮಗಳಂತೆ ಹೆಚ್ಚು ದುಡ್ಡಿನ ಅಗತ್ಯವಿಲ್ಲ. ನಿಜ ಹೇಳಬೇಕೆಂದರೆ ಖರ್ಚೆ ಇಲ್ಲವೆಂದರೂ ತಪ್ಪಿಲ್ಲ. ಆದರೂ ಕೆಲವೊಮ್ಮೆ ಪತ್ರಿಕೆಯ ಶೃಂಗಾರಕ್ಕೆ ಅಂದರೆ ಗ್ಲಿಟರಿಂಗ್ ಪೆನ್, ಸ್ಕೆಚ್ ಪೆನ್, ಗಮ್, ಮೊದಲಾದ ಸಣ್ಣಪುಟ್ಟ ಸಾಮಾಗ್ರಿಗಳು ಅಗತ್ಯವಾದಾಗ ಖಂಡಿತ ದುಡ್ಡು ಬೇಕೇ ಬೇಕು. ಅದನ್ನು ವಿಭಾಗವೋ, ಸಂಸ್ಥೆಯೋ ಭರಿಸಿದರೆ ಉತ್ತಮ. ಹಾಗಿಲ್ಲದಿದ್ದಲ್ಲಿ ತಂಡದವರೇ ನಿಮ್ಮ ದಿನನಿತ್ಯದ ಖರ್ಚಿನ/(ಪಾಕೆಟ್ ಮನಿಯ) ಹಣದ ಒಂದಂಶವನ್ನು ಇದಕ್ಕೆ ಮೀಸಲಿಟ್ಟರೂ ಸಾಕು. ಜೊತೆಗೆ ಕಡಿಮೆ ವೆಚ್ಚದಲ್ಲಿ ಬಿತ್ತಿ ಪತ್ರಿಕೆಯನ್ನು ಮುನ್ನಡೆಸುವ ಟ್ಯಾಲೆಂಟ್ ಇರಬೇಕು. ಬಿಳಿ ಅಥವಾ ಬಣ್ಣದ ದೊಡ್ಡ ಡ್ರಾಯಿಂಗ್ ಶೀಟ್‍ನಲ್ಲಿ ನಿರ್ದಿಷ್ಟ ಆಶಯವುಳ್ಳ ಬಿತ್ತಿ ಪತ್ರಿಕೆಯನ್ನು ನಿರ್ಮಿಸಬಹುದು. ಸುಂದರವಾಗಿ ಮುತ್ತು ಪೋಣಿಸಿದಂತಿರುವ ಕೈಬರವಣಿಗೆಯೇ ಇದಕ್ಕೆ ಮೂಲಾಧಾರ. (‘ಮೂಗಿಗಿಂತ ಮೂಗುತ್ತಿ ಭಾg’À ಎಂಬಂತೆ ಮೂಲ ವಸ್ತುವಿಗಿಂತ ಹೆಚ್ಚಾಗಿರುವ ಬಾಹ್ಯ ಅಲಂಕಾರ ಬಿತ್ತಿ ಪತ್ರಿಕೆಗೆ ಶೋಭೆ ತರಿಸುವುದಿಲ್ಲ. ಹಾಗಾಗಿ ಅದು ಸಾಧ್ಯವಾದಷ್ಟು ಸಿಂಪಲ್ ಮತ್ತು ಆಕರ್ಷಕವಾಗಿರಲಿ.)
ವಿಷಯಾಧಾರಿತ ಮಾಹಿತಿಪೂರ್ಣ ಬರಹಗಳು, ಪ್ರವಾಸ ಕಥನ, ಕವನಗಳು, ಲಘು ಬರಹಗಳು, ನಗೆ ಬುಗ್ಗೆಗಳು, ಕಾರ್ಟೂನ್‍ಗಳು, ರಸಪ್ರಶ್ನೆ ಮಾದರಿಯ ಮಾಹಿತಿ ಕೋಶ, ನುಡಿಮುತ್ತುಗಳು, ಸಾಧಕರ, ಹೊಸ ಅನ್ವೇಷಣೆಗಳ ಪರಿಚಯ ಇತ್ಯಾದಿ.......... ಹೀಗೆ ಅವುಗಳಲ್ಲಿ ಅಡಕವಾಗಿರಬಹುದಾದ ಸಂಗತಿಗಳು ಮುಂದುವರೆಯುತ್ತವೆ. ನಿರ್ದಿಷ್ಟ ಚೌಕಟ್ಟಿದ್ದರೂ, ಅನೇಕ ಚೌಕಟ್ಟಿಲ್ಲದ ಚಿತ್ರಗಳನ್ನು ಪೋಣಿಸಲು ಸಾಧ್ಯವಿದೆ. ಇಲ್ಲಿಂದ ಪ್ರಾರಂಭವಾಗುವ ವಿದ್ಯಾರ್ಥಿಗಳ ತೊದಲು ಹೆಜ್ಜೆಯ ಮೊದಲ ಬರವಣಿಗೆ, ಮುಂದೆ ಅವರನ್ನ ಅವರದ್ದೇ ಕ್ಷೇತ್ರದ ಉತ್ತಮ ಬರಹಗಾರರನ್ನಾಗಿ ರೂಪಿಸಬಹುದು.
ಕೈಬರಹದಿಂದ ಪ್ರಾರಂಭವಾದ ಗೋಡೆ ಪತ್ರಿಕೆಗಳು ಇಂದು ಉನ್ನತ ತಂತ್ರಜ್ಞಾನದÀ ಆವಿಷ್ಕಾರದ ಫಲವಾಗಿ ಮುದ್ರಣ ರೂಪದಲ್ಲೂ ಹೊರಬರುತ್ತಿವೆ. ಅನೇಕ ವಿಶ್ವವಿದ್ಯಾನಿಲಯ, ಶಾಲಾ ಕಾಲೇಜುಗಳಲ್ಲಿ ಎಲ್ಲಾ ಬಿಡಿ ಪ್ರತಿಗಳನ್ನು ಒಟ್ಟಾಗಿ ಅಡಕಗೊಳಿಸಿ ಪುಸ್ತಕರೂಪದಲ್ಲೂ ಹೊರತರುವ ಪರಿಪಾಠವಿದೆ. ಜೊತೆಗೆ ಬೃಹತ್ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲ್ಲಾ ವಿಭಾಗಗಳಿಂದಲೂ ಬಿತ್ತಿ/ಭಿತ್ತಿ ಪತ್ರಿಕೆಗಳು ಹೊರಬರುವುದರಿಂದ ಅವುಗಳ ಮಧ್ಯೆ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ವಿಭಾಗಕ್ಕೆ ಪ್ರಶಸ್ತಿ ನೀಡಿ ಗೌರವಿಸುವ, ಪ್ರೋತ್ಸಾಹಿಸುವುದೂ ಚಾಲ್ತಿಯಲ್ಲಿದೆ. ಇದೊಂದು ಉತ್ತಮ ಕಾರ್ಯ. ಇದರಿಂದ ಗೋಡೆ ಪತ್ರಿಕೆಗಳ ಬಗ್ಗೆ ಆಸಕ್ತಿ ಮತ್ತು ಕಾಳಜಿ ಎರಡೂ ಹೆಚ್ಚುತ್ತವೆ.
ಇಂತಹ ಗೋಡೆ ಪತ್ರಿಕೆಗಳು ಕೇವಲ ‘ಕನ್ನಡ/ಇಂಗ್ಲೀಷ್ ಭಾಷಾ ಅಥವಾ ಕನ್ನಡ/ಇಂಗ್ಲೀಷ್ ಸಾಹಿತ್ಯ’ ವಿಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಗೋಡೆ ಪತ್ರಿಕೆಗಳೆಂದರೆ ಕೇವಲ ಸಾಹಿತ್ಯ ಮಾತ್ರವಲ್ಲ ಅವುಗಳಲ್ಲಿ ಇನ್ನೂ ಅನೇಕ ಸಂಗತಿಗಳನ್ನು ಹೇಳಲು ಸಾಧ್ಯವಿದೆ. ಆ ಸಾಧ್ಯತೆಯಿಂದಲೇ ಅನೇಕ ಕಾಲೇಜುಗಳ ಹೆಚ್ಚಿನ ಎಲ್ಲಾ ವಿಭಾಗಗಳೂ ತಮ್ಮ ಆಶಯ-ಧೋರಣೆಗೆ ತಕ್ಕಂತೆ ತಮ್ಮ ಇತಿ-ಮಿತಿಯಲ್ಲಿಯೇ ಚೊಕ್ಕದಾದ ಗೋಡೆ ಪತ್ರಿಕೆಗಳನ್ನು ತರುತ್ತವೆ. ತರಲು ಸಾಧ್ಯ. ಅದಕ್ಕೆ ಬೇಕಿರುವುದು ವಿದ್ಯಾರ್ಥಿಗಳ ಉತ್ಸಾಹ, ಆಸ್ಥೆ ಮತ್ತು ಶಾಲಾ ಕಾಲೇಜು ಮುಖ್ಯಸ್ಥರ-ಶಿಕ್ಷಕರ ನಿರಂತರ ಮಾರ್ಗದರ್ಶನ, ಪ್ರೋತ್ಸಾಹ.
---
*‘ತರಗತಿಯ ಒಳಗೊಂದು ಕಪ್ಪು ಹಲಗೆ,
ಹೊರಗೊಂದು ‘ಬಿತ್ತಿ’ಗಲಗೆ’ ಹಾಗಿದ್ದಾಗ ಮಾತ್ರ ವಿದ್ಯಾರ್ಥಿಗಳ ಸೃಷ್ಟಿಶೀಲ ಅಭಿವ್ಯಕ್ತಿಗೆ ಪೂರಕವಾದ ವಿಭಾಗ/ಕಾಲೇಜು ಪರಿಪೂರ್ಣವಾಗಿ ರೂಪುಗೊಳ್ಳಲು ಸಾಧ್ಯ.
__________

ಶ್ರೇಯಾಂಕ ಎಸ್ ರಾನಡೆ.


No comments:

Post a Comment