Monday, September 26, 2016

ಪಂಡಿತ್ ದೀನದಯಾಳ ಉಪಾಧ್ಯಾಯರ ಜನ್ಮಶತಮಾನೋತ್ಸವ ಕಾರ್ಯಕ್ರಮ ವರದಿ ಹಾಗೂ ಭಾಷಣದ ಸಂಕ್ಷಿಪ್ತ ರೂಪ.

ಕಾರ್ಯಕ್ರಮ ವರದಿ ಹಾಗೂ ಭಾಷಣದ ಅತ್ಯಂತ ಸಂಕ್ಷಿಪ್ತ ರೂಪ.

ಇದು ದೇವತೆಗಳ ರಾಷ್ಟ್ರ. ಕೇವಲ ಪುಷ್ಪಾಂಜಲಿ ಮಾತ್ರವಲ್ಲ ಭಾರತ ಜಗದ್ಗುರುವಾಗಲು ಜೀವನಾಂಜಲಿಯ ಅರ್ಪಣೆಯಾಗಬೇಕು: ಮುಕುಲ್ ಕಾನಿಟ್ಕರ್.
ಪಂಡಿತ್ ದೀನದಯಾಳ ಉಪಾಧ್ಯಾಯರ ಜನ್ಮಶತಮಾನೋತ್ಸವ ಕಾರ್ಯಕ್ರಮ.

ಬೆಂಗಳೂರು: ದಿನಾಂಕ 25-09-2016 ಭಾನುವಾರ.

ನಗರದ ಆರ್.ವಿ.ಡೆಂಟಲ್ ಕಾಲೇಜ್ ಸಭಾಂಗಣದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮಶತಮಾನೋತ್ಸವವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಚರಿಸಲಾಯಿತು. ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಹ ಕಾರ್ಯಕಾರಿ ಕಾರ್ಯದರ್ಶಿ ಶ್ರೀ ಮುಕುಲ್ ಕಾನಿಟ್ಕರ್ ಪಂಡಿತ್ ದೀನದಯಾಳ್ ಉಪಾಧ್ಯಾಯರು ಪ್ರತಿಪಾದಿಸಿದ್ದ ಏಕಾತ್ಮ ಮಾನವತಾವಾದ ಕುರಿತು ತಳಸ್ಪರ್ಶಿ ಒಳನೋಟಗಳ ಅವಿಸ್ಮರಣೀಯ ಬೌದ್ದಿಕ್ (ಉಪನ್ಯಾಸ) ನೀಡಿದರು.

"ಸಂಘ ಸಾಧನೆಯ ಸಾಕ್ಷಾತ್ಕಾರದಿಂದ ಋಷಿತ್ವಕ್ಕೆ ಏರಿದ ಮಹಾನ್ ಕಾರ್ಯಕರ್ತರಲ್ಲಿ ದೀನದಯಾಳ್ ಉಪಾಧ್ಯಾಯರು ಅಗ್ರಗಣ್ಯ. ಅವರ ಸಮಗ್ರ ಜೀವನವೇ ತ್ಯಾಗ ಮತ್ತು ಜ್ಞಾನದ ಗಾಥೆ. ಆದ್ದರಿಂದಲೇ ಅವರೊಬ್ಬ ರಾಷ್ಟ್ರಋಷಿ. ಸತ್ಯದ ಸಾಕ್ಷಾತ್ಕಾರ ಒಂದು ಭಾಗವಾದರೆ ಅದನ್ನು ಸಮಕಾಲೀನ ಕಾಲಘಟ್ಟಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಯುಘಾನುಕೂಲ ಭಾಷೆಯಲ್ಲಿ ಸರ್ವರ ಮುಂದಿಡುವುದೇ ಋಷಿಯ ಕೆಲಸ. ಅದನ್ನು ಏಕಾತ್ಮ ಮಾನವತಾವಾದದ ಮುಖೇನ ಈ ದೇಶದಲ್ಲಿ ಅವಿರ್ಭವಿಸಿದ್ದ ಜೀವನದ ಕಲೆ ಹಾಗೂ ವಿಜ್ಞಾನವನ್ನು ಎಲ್ಲರ ಮುಂದಿಟ್ಟರು. ವಿವಿಧ ಹಂತದ ರಾಜಕೀಯ ಜವಾಬ್ದಾರಿಯನ್ನು ವಹಿಸಿಕೊಂಡೂ ತಮ್ಮ ತ್ಯಾಗ ಮತ್ತು ನೀತಿಯ ಮೂಲಕ ರಾಜನೀತಿಗೆ ಯಾವ ರೀತಿಯ ಕೊಡುಗೆಯನ್ನು ನೀಡಬಹುದೆಂಬುದನ್ನು ಅವರು ತೋರಿಸಿಕೊಟ್ಟರು.

ವ್ಯಕ್ತಿಪೂಜೆಗೆ ಪ್ರಾಶಸ್ತ್ಯ ನೀಡದ ನಮ್ಮ ಪರಂಪರೆಯಲ್ಲಿ ವರ್ಷಕ್ಕೊಮ್ಮೆ ಪಂಡಿತರಿಗೆ ಸ್ಮರಣಾಂಜಲಿ ಸಲ್ಲಿಸಿ ಅವರ ಬದಕಿನ ತಪಸ್ಸು, ಸಾಧನೆಗಳನ್ನು ಅರಿತು ಅವುಗಳನ್ನು ನಾವು ಅಳವಡಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಸಮೃದ್ಧಗೊಳಿಸಿಕೊಂಡು ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಈ ಜಯಂತಿಯ ಆಚರಣೆಗೆ ಅರ್ಥಬರುತ್ತದೆ. ಮಾತೃಭೂಮಿಯ ಸೇವೆಗಾಗಿ ತಮ್ಮ ಸಮಸ್ತ ಬದುಕನ್ನು ಸಮಿದೆಯಂತೆ ಸವೆಸಿದ ಅವರ ಮಾರ್ಗ, ತ್ಯಾಗ, ದಕ್ಷತೆ, ಚಿಂತನೆ, ಪಂಚೇಂದ್ರಿಯಗಳ ಏಕತೆಯಿಂದ ಪ್ರಕೃತಿ ಸಮಾಜಗಳೊಂದಿಗೆ ಸಾಮರಸ್ಯ ಸಾಧಿಸಿದ ರೀತಿ ಇವೆಲ್ಲವೂ ಒಟ್ಟಾಗಿ ದೇಶಕ್ಕೆ ಮಾರ್ಗದರ್ಶನ ನೀಡುವಂತಾಗಬೇಕು. ಭಾರತೀಯ ಸಂಸ್ಕøತಿಯ ಮೂಲಾಧಾರ ತ್ಯಾಗ. ಸರ್ವವನ್ನೂ ಸಮರ್ಪಿಸಿದ ತ್ಯಾಗಿಗಳೇ ಭಾರತದ ನಿಜವಾದ ನಾಯಕರು. ಜೀವನದಲ್ಲಿ ನಮಗೆ ಹೆಚ್ಚು ಹೆಚ್ಚು ತ್ಯಾಗ ಮಾಡುವ, ಸಮಾಜದಲ್ಲಿ ನಾವು ಲೀನವಾಗುವ ನಿಸ್ವಾರ್ಥ ಜೀವನಕ್ರಮವನ್ನು ಅಳವಡಿಸಿಕೊಂಡರೆ ಅದೇ ಪಂಡಿತರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ದೀನದಯಾಳ ಉಪಾಧ್ಯಾಯರು ವಿಚಾರ ಮತ್ತು ಕ್ರಿಯೆಯಲ್ಲಿ ಅವಿಚ್ಛಿನ್ನತೆಯಿರದ ಏಕಾತ್ಮತೆಯನ್ನು ಸಾಧಿಸಿದ್ದರು. ಶ್ರೇಷ್ಟತೆಯ ಲಕ್ಷಣವೆಂಬಂತೆ ಚತುರ್ವಿಧ ಸಿದ್ಧಿಯನ್ನು ಸಾಧಿಸಿದ್ದರು. ಅಂದರೆ ಸತ್ಯವನ್ನು ಸಾಕ್ಷಾತ್ಕಾರಗೊಳಿಸಿಕೊಂಡರು, ಆತ್ಮಸಾಥಿಯಾಗಿಸಿದರು, ಅದನ್ನೇ ಬದುಕಿದರು. ಹಾಗೂ ಅದರ ಸಂಹಿತಾಕರಣಗೊಳಿಸಿದರು(ಯುಗಧರ್ಮಕ್ಕೆ ಸಹ್ಯವೆನಿಸುವ ಭಾಷೆ-ರೀತಿಯಲ್ಲಿ ಅದರ ದಾಖಲೀಕರಣ). ಅದು ಪ್ರಕೃತಿಯನ್ನು ಅರಿಯುವ, ಪ್ರಕೃತಿಯೊಂದಿಗೆ ಲೀನವಾಗುವ ನೈತಿಕ ಮಾರ್ಗ. ಪ್ರಕೃತಿಯ ಸತ್ಯವನ್ನು ಅರಿತು ಪರಂಪರೆಯ ರೂಪದಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಹಿಂದುತ್ವ. ಇದೇ ಪಂಡಿತರು ಹೇಳಿದ್ದ ಭಾರತದ 'ಚಿತಿ'. ಚಿತಿ ಎಂದರೆ ಜೀವಂತವಾಗಿರುವ ಪ್ರತಿಯೊಂದೂ ಭಿನ್ನ ಮತ್ತು ಅದ್ವಿತೀಯ ಎಂಬುದನ್ನು ಅರಿಯುವುದು. ಇವುಗಳನ್ನೇ ಉಪಾಧ್ಯಾಯರು ಆಧುನಿಕ ಪರಿಭಾಷೆಗೆ ಹೊಂದುವ ರೂಪದಲ್ಲಿ ಪಕ್ವ ಭಾರತೀಯ ಮೌಲ್ಯಗಳನ್ನು ಸಮರ್ಥ ರಾಜಕೀಯ ವಿಚಾರಧಾರೆಯಾಗಿ ಮಂಡಿಸಿದರು.ವಿಶ್ವದ ಸಮಸ್ತರಿಗೂ ಒಳಿತನ್ನು ಮಾಡುವ ಭಾವನೆ ಮತ್ತು ಸಾಮಥ್ರ್ಯವಿರುವುದು ಕೇವಲ ಸನಾತನ ಆರ್ಥಿಕತೆಗೆ. ಅದೇ ಏಕಾತ್ಮ ಮಾನವತೆಯ ತತ್ವ. ಭಾರತದ ಪರಂಪರೆಯ ಅಂತರ್ಗತ ಸಂಗತಿಗಳನ್ನು ಒಂದು ಪರಿಪೂರ್ಣ ರಾಜಕೀಯ ಇಸಂ(ವಿಚಾರಧಾರೆ)ಯಾಗಿ ಕಟ್ಟುವ ಮೂಲಕ ಆ ಹೊತ್ತಿಗೆ ಪ್ರಭಾವಶಾಲಿಯೆಂದು ತೋರಿದ್ದ ಬಂಡವಾಳಶಾಹಿವಾದ, ಕಮ್ಯುನಿಸಂ ಹಾಗೂ ಭಾರತೀಯತ್ವವಿರದ ವಿಚಾರಗಳ ಪೊಳ್ಳುತನವನ್ನು ವಿಶ್ವಕ್ಕೇ ತೋರಿಸಿಕೊಟ್ಟರು. ವಿಶ್ವದ ಯಾವ ವಿಚಾರಧಾರೆಗಳೂ ಮನುಷ್ಯರನ್ನು ಪರಿಪೂರ್ಣವಾಗಿ ಕಟ್ಟಿಕೊಡುವುದಿಲ್ಲ ಹಾಗೂ ಸಮಗ್ರ ಮನುಷ್ಯ ಚೇತನವನ್ನು ಪರಿಗಣಿಸುವುದಿಲ್ಲ. ಹಾಗಾಗಿಯೇ ಆ ವಿಚಾರಧಾರೆಗಳೆಲ್ಲ ಇಂದು ಸೋಲುತ್ತಿವೆ. ಆದರೆ ಏಕಾತ್ಮತೆ ಪ್ರತಿಯೊಬ್ಬರ ಅನನ್ಯತೆ, ವಿಶಿಷ್ಟತೆಗಳನ್ನು ಕಂಡುಕೊಳ್ಳುವ, ಅವನ್ನು ರಾಷ್ಟ್ರಹಿತ ಮಾರ್ಗದಲ್ಲಿ ಮುನ್ನಡೆಸುದಷ್ಟೇ ಅಲ್ಲದೆ ಸಮಾಜಕ್ಕೆ ಸಲ್ಲಿಸಬೇಕಾದ ಕರ್ತವ್ಯದ ಉತ್ತರದಾಯಿತ್ವವನ್ನೂ ಕಟ್ಟಿಕೊಡುತ್ತದೆ.

ಇಡೀ ವಿಶ್ವವೇ ಭಾರತೀಯ ಜೀವನ ಶೈಲಿಯನ್ನು ಮನುಕುಲದ ತತ್ವವಾಗಿ ಪರಿಗಣಿಸಿ ಗೌರವಿಸುತ್ತಿರುವ ಈ ವಿಜಯಶಾಲಿ ಹೊತ್ತಿನಲ್ಲಿ ನಾವು ದೀನದಯಾಳ ಉಪಾಧ್ಯಾಯರ ಏಕಾತ್ಮ ಮಾನವತೆಯನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದೇವೆ, ಈ ವಿಜಯ 2014ರಿಂದ(ಲೋಕಸಭೆಯ ಚುನಾವಣಾ ವರ್ಷ) ಪ್ರಾರಂಭವಾಗಿದ್ದಲ್ಲ. ಕಳೆದ ಶತಮಾನದಿಂದಲೇ ವಿಜಯದ ಪ್ರಾರಂಭವಾಗಿತ್ತು. ಬ್ರೆಜಿಲ್‍ನ ರಿಯೋ ಡಿ ಜನೆರಿಯೋದಲ್ಲಿ 1995ರಲ್ಲಿ ಪರಿಸರವನ್ನು ಸಂರಕ್ಷಿಸಲು ಮೊತ್ತ ಮೊದಲು ನಡೆದ 'ವಿಶ್ವ ಭೂಮಿ' ಸಮ್ಮೇಳನದಲ್ಲಿ ವಿಶ್ವದ 195 ದೇಶಗಳೂ ಭಾರತೀಯ ಜೀವನ ಕ್ರಮದಂತೆ ಭೂಮಿಯನ್ನು 'ಮದರ್ ಅರ್ಥ್' ಎಂದರೆ ಭೂಮಿತಾಯಿ ಎಂದು ಘೋಷಿಸಿ ಅದನ್ನು ಸಂರಕ್ಷಿಸುವ ಪಣತೊಟ್ಟವು. ಇಂತಹ ಅದೆಷ್ಟೋ ನಿದರ್ಶನಗಳು ಪುನರಾವರ್ತನೆಯಾಗುತ್ತಿರುತ್ತವೆ. ಆಗೆಲ್ಲಾ ಭಾರತೀಯತೆಯ ಶ್ರೇಷ್ಟತೆ, ಅಪ್ರತಿಮತೆಯನ್ನು ಕೊಂಡಾಡಲಾಗುತ್ತದೆ.

ಮಹಾನ್ ಪುರುಷ ಪಂಡಿತ ದೀನದಯಾಳ ಉಪಾಧ್ಯಾಯರ ಸಾವಿನ ಕಾರಣ ಇನ್ನೂ ನಿಗೂಢವಾಗಿದೆ. ಚಂದ್ರಚೂಡ್ ಆಯೋಗ ಅನೇಕ ಸಂಗತಿಗಳನ್ನು ಹೇಳಿತು ಆದರೆ ವಾಸ್ತವ ಮಾತ್ರ ಬೆಳಕಿಗೇ ಬಂದಿಲ್ಲ. ಅಂತಹ ಬೌದ್ಧಿಕ ಸತ್ವಶಾಲಿ ವ್ಯಕ್ತಿ ಈ ರೀತಿ ಸಾವನ್ನಪ್ಪಿದ್ದು ದೇಶಕ್ಕಾದ ನಷ್ಟ. ಇದು ನಿಜಕ್ಕೂ ನೋವಿನ ಸಂಗತಿ. ನಮ್ಮ ನಮ್ಮ ಕಾರ್ಯಕ್ಷೇತ್ರದಲ್ಲಿ ಏಕಾತ್ಮ ಮಾನವತೆಯನ್ನು ಅಳವಡಿಸಿಕೊಂಡಾಗ ಭಾರತ ಮತ್ತು ಭಾರತೀಯರು ವಿಶ್ವಗುರುವಾಗಲು ಸಾಧ್ಯ. ಉದಾಹರಣೆಗೆ ಲೋಕತಂತ್ರವೂ ಸಾತ್ವಿಕ ಹಾಗೂ ಏಕಾತ್ಮವಾಗಬೇಕಿದೆ. ಇಂದು ಸಂಕುಚಿತತೆ ಪ್ರತಿಯೊಬ್ಬರನ್ನೂ ಪೊಳ್ಳಾಗಿಸುತ್ತಿದೆ. ಇದೇ ನಮ್ಮನ್ನು ದೂರ ಮಾಡುತ್ತಿದೆ. ತುಂಡರಿಸುತ್ತಿದೆ. ಏಕಾತ್ಮ ಮಾನವತಾ ದರ್ಶನ ಅವೆಲ್ಲವನ್ನೂ ಬೆಸೆಯುತ್ತದೆ. ಯಾರು ಕೊಡುತ್ತಾರೋ ಅವರು ದೇವರು. ಏಕಾತ್ಮ ಮಾನವತೆ ಸಾಕಾರಗೊಳ್ಳಲು ನಾವೂ ದೇವರಾಗಬೇಕು. ಇದು ದೇವರ ದೇಶ ಇದನ್ನು ಬೇಡುವ ಮಾನವರ ದೇಶವಾಗಿಸಲು ಸಾಧ್ಯವಿಲ್ಲ. ಕೇವಲ ಪುಷ್ಪಾಂಜಲಿ ಮಾತ್ರವಲ್ಲ ಭಾರತ ಜಗದ್ಗುರುವಾಗಲು ಜೀವನಾಂಜಲಿಯ ಅರ್ಪಣೆಯಾಗಬೇಕು. ಭಾರತ ವಿಜಯಶಾಲಿನಿ ಸಂಸ್ಕøತಿಯಾಗಿ ಪ್ರಜ್ವಲಿಸಿದಾಗ ಇಡೀ ವಿಶ್ವವೂ ಅದರ ಸಕಲ ಫಲ ಅನುಭವಿಸಲಿದೆ. ವಿಶ್ವಶಾಂತಿಯ ಪ್ರತಿಷ್ಟಾಪನೆಯಾಗುತ್ತದೆ. ಭಾರತದ ಈ ರಥ ಜಗನ್ನಾಥನ ಬೃಹತ್ ರಥ ಇದನ್ನು ಒಬ್ಬ ಎಳೆಯದೆ ಕೈಬಿಟ್ಟರೆ ರಥ ಮುಂದೆ ಹೋಗುವುದು ನಿಲ್ಲವುದಿಲ್ಲ. ಆದರೆ ಪ್ರತಿಯೊಬ್ಬರೂ ಕೈಬಿಡಬಾರದು. ಈ ಯುಗಪರ್ವದ ವಿಶೇಷ ಸಂದರ್ಭದಲ್ಲಿ ನಾವು ಮೈಮರೆತಿರಬಾರದಷ್ಟೇ." ಎಂದರು.
ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ನಾ. ತಿಪ್ಪೇಸ್ವಾಮಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

-----
ಶ್ರೇಯಾಂಕ ಎಸ್ ರಾನಡೆ.

No comments:

Post a Comment