Thursday, January 12, 2017

ಸಮಾಜವಾದಿ ಪಕ್ಷದ "ಯಾದವೀ" ಕಲಹ.

ಸಮಾಜವಾದಿ ಪಕ್ಷದ  "ಯಾದವೀ"  ಕಲಹ.

ದಾಯಾದಿ ಕುಟುಂಬ ಕಲಹ ಬಗೆಹರಿಯದೆ ಕುರುಕ್ಷೇತ್ರ ಯುದ್ಧದಲ್ಲಿ ಕೊನೆಯಾದ ಮಹಾಭಾರತದ ಕಥೆ ಭಾರತದ ಸ್ಮøತಿಪಟಲದಲ್ಲಿ ಭದ್ರವಾಗಿ ನೆಲೆಯೂರಿದೆ. ಪರಿಣಾಮ ಗೊತ್ತಿದರೂ ಇಂದಿಗೂ ಮನೆಯೊಳಗೆ ಬಗೆಹರಿಯಬೇಕಾದ ಕುಟುಂಬ ಕಲಹಗಳು ಬೀದಿಗೆ ಬಂದರೂ ನಿಲ್ಲುವುದಿಲ್ಲ. ಅಧಿಕಾರ ಎಂಬ ಪದವಿಯ ಮುಂದೆ ಎಲ್ಲ ಸಂಬಂಧಗಳೂ ಶೂನ್ಯವಾಗಿ ಬಿಡುತ್ತವೆ. ಭಾರತೀಯ ರಾಜಕಾರಣದಲ್ಲಿ ಇಂತಹ ಕೆಲವಾರು ಉದಾಹರಣೆಗಳನ್ನು ಇಂದಿಗೂ ಕಾಣಲು ಸಾಧ್ಯವಿದೆ. ಇತಿಹಾಸದಿಂದ ಪಾಠ ಕಲಿಯುವ ಬದಲು ಗತಕ್ಕೆ ಮತ್ತೊಂದು ನಿದರ್ಶನವಾಗುವ ಅಪಾಯವೇ ಹೆಚ್ಚುತ್ತಿದೆ. ಬಹುಶಃ ಮುನುಷ್ಯ ಬದುಕಿನ ಆಂತರ್ಯದಲ್ಲಿಯೇ ಅಡಗಿ ಜೊತೆಯಲ್ಲಿಯೇ ಅವಸಾನ ಹೊಂದಲಿರುವ "ಹುಟ್ಟುತ್ತ ಅಣ್ಣತಮ್ಮಂದಿರು ಬೆಳೆಯುತ್ತ ದಾಯಾದಿಗಳು" ಎಂಬ ಗಾದೆ ಮಾತು ಕಾಲದಿಂದ ಕಾಲಕ್ಕೆ ಆನ್ವಯಿಕತೆಯನ್ನು ಒದಗಿಸುತ್ತಿದೆ.

Courtesy: Famous cartoon on the SP tussle.


ಉತ್ತರಪ್ರದೇಶದಲ್ಲಿ 25 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಮಾಜವಾದಿ ಪಕ್ಷದಲ್ಲಿ ಈಗ ಅದರ ನೇತಾರ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್, ಶಿವಪಾಲ್ ಸಿಂಗ್ ಹಾಗೂ ತನ್ನದೇ ಸ್ವಂತ ಮಗ ಅಖಿಲೇಶ್ ಸಿಂಗ್ ಯಾದವ್, ದಾಯಾದಿ ರಾಮ್‍ಗೋಪಾಲ್ ಯಾದವ್ ನಡುವೆ ಸೈಕಲ್ ನೇತೃತ್ವಕ್ಕಾಗಿ ನಡೆಯುತ್ತಿರುವ ಯುದ್ಧ ಚುನಾವಣಾ ಆಯೋಗದ ಕಟಕಟೆಯಲ್ಲಿ ನಿಂತಿದೆ. ಚುನಾವಣೆಯ ಕಾವು ಎರಡೂ ಬಣಗಳನ್ನು ಶಾಂತಗೊಳಿಸುತ್ತಿದ್ದರೆ ದಿನದಿಂದ ದಿನಕ್ಕೆ ರಾಜಿ ಸಂಧಾನದ ಆಯ್ಕೆ ಮರೀಚಿಕೆಯಾಗುತ್ತಿದೆ. ಈ ಸಂಘರ್ಷ ಎಷ್ಟರ ಮಟ್ಟಿಗಿದೆಯೆಂದರೆ ಪಕ್ಷ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಒಂದೋ ಸಮಾಜವಾದಿ ಪಕ್ಷ ಹಳೆಯ ಹಾಗೂ ಹೊಸ ತಲೆಮಾರಿನ ನಾಯಕತ್ವದ ನೆಲೆಯಲ್ಲಿ ವಿಭಜನೆಯಾಗಲಿದೆ. ಇಲ್ಲವಾದಲ್ಲಿ ಕಾಲಾಂತರದಲ್ಲಿ ಮಗನಿಂದಲೇ ಹೊಸ ಪಕ್ಷವೊಂದು ರೂಪುಗೊಳ್ಳುವ ಸಾಧ್ಯತೆಯಿದೆ.

"ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ
ಅವರು ಜೀವನವೆಂಬ ಹಂಬಲಕ್ಕೆ ಹಾತೋರೆವ ಮಕ್ಕಳು
ಅವರು ನಿಮ್ಮ ಮೂಲಕ ಬರುತ್ತಾರೆ ಆದರೆ ನಿಮ್ಮಿಂದಲ್ಲ
ಅವರು ನಿಮ್ಮೊಡನಿದ್ದೂ ನಿಮ್ಮವರಾಗರು..."
ಮಕ್ಕಳ ಮೇಲಿನ ಖಲೀಲ್ ಗಿಬ್ರಾನನ 'ಆನ್ ಚಿಲ್ಡರ್ನ್' ಕವನ ಇಳಿವಯಸ್ಸಿನ ರಾಜಕಾರಣ ಹಾಗೂ ಬದುಕನ್ನು ನೋಡುತ್ತಿರುವ ಮುಲಾಯಂ ಸಿಂಗ್‍ನ ಅಳಲಿನ ಕನವರಿಕೆಯಂತೆಯೂ ತೋರುತ್ತದೆ. ಸ್ವಂತ ಮಗನೇ ಅಪ್ಪನನ್ನು ಪಕ್ಷದಿಂದ ಉಚ್ಛಾಟಿಸಿ ಸಮಾಜವಾದಿ ಪಕ್ಷವನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲೆತ್ನಿಸುತ್ತಿರುವ ಆ ಮೂಲಕ ಅಪ್ಪನನ್ನೇ ಬದಿಗೆ ಸರಿಸಲು ಹೊರಟಿರುವ ಅಖಿಲೇಶ್ ಯಾದವ್ ಈ ಕವನದಲ್ಲಿ ಬಂದಿರುವ ಮಕ್ಕಳ ಪ್ರತಿಮೆಯಂತೆ ಕಾಣುತ್ತಿದ್ದಾನೆ. ಜಯಪ್ರಕಾಶ್ ನಾರಾಯಣ್ ಚಳುವಳಿಯಿಂದ ಪ್ರೇರಿತರಾಗಿ, ಜನಸಂಖ್ಯೆಯಲ್ಲಿ ಹಾಗೂ ಜಾತಿ ಪ್ರಾಬಲ್ಯದಲ್ಲಿ ದೇಶದ ಅತೀ ದೊಡ್ಡ ರಾಜ್ಯ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಜನ್ಮತಾಳುತ್ತದೆ. ಮುಲಾಯಂ ಪಕ್ಷ ಅಧಿಕಾರಕ್ಕೇರಲು ಮುಂದೆ ಮಗನನ್ನೇ ಮುಖ್ಯಮಂತ್ರಿಯನ್ನಾಗಿಸಲು ಸಾಕಷ್ಟು ಶ್ರಮ ಪಡುತ್ತಾರೆ. ಇಷ್ಟೆಲ್ಲವನ್ನೂ ತಮ್ಮ ಕುಟುಂಬಕ್ಕಾಗಿ ಮಾಡಿದ ಮುಲಾಯಂಗೆ ಕೊನೆಯಲ್ಲಿ ಸಿಕ್ಕಿದು ಅದೇ ಪಕ್ಷದಿಂದ ಉಚ್ಛಾಟನೆಯ ಬಹುಮಾನ. ಈ ಉಚ್ಛಾಟನೆಯ ತೀರ್ಪನ್ನು ಚುನಾವಣಾ ಆಯೋಗ ನೀಡಲಿದೆ. ಆದರೆ ಮಗನಿಂದಾದ ಅಪಮಾನವನ್ನು ಮುಲಾಯಂ ತಮ್ಮ  ಜೀವಿತಾವಧಿಯಲ್ಲಿ ಮರೆಯಲು ಸಾಧ್ಯವಿಲ್ಲ. ಅನೇಕ ರಾಜಕೀಯ ಚುನಾವಣೆಗಳನ್ನು ಗೆದ್ದಿರುವ ಮುಲಾಯಂ ಸಿಂಗ್ ಜೀವನವೆಂಬ ಚುನಾವಣೆಯಲ್ಲಿ ವಿಫಲರಾಗಿ ಸೋತಿದ್ದಾರೆ. ಈ ಎಲ್ಲಾ ನಾಟಕೀಯ ಆಡುಂಬೋಲದಲ್ಲಿ ಹೈರಾಣಾಗಿ, ಗೊಂದಲದಿಂದ ತಲೆಕೆಳಗಾಗಿ ಕುಳಿತಿರುವುದು ಉತ್ತರಪ್ರದೇಶದ ಮತದಾರರು.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದೆ. 403 ಸದಸ್ಯಬಲದ ವಿಧಾನಸಭೆಗೆ ಜನವರಿ 17ರಿಂದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. 224 ಜನಪ್ರತಿನಿಧಿಗಳನ್ನು (224 ಇದು ಕರ್ನಾಟಕದ ಒಟ್ಟು ವಿಧಾನಸಭೆಯ ಸಂಖ್ಯಾಬಲ) ಹೊಂದಿರುವ ಉತ್ತರ ಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷಕ್ಕೆ ಅಪ್ಪ ಮಗನ ಜಗಳದಲ್ಲಿ ಪಕ್ಷದ "ಸೈಕಲ್" ಚಿಹ್ನೆ ಯಾವ ಬಣದ ಪಾಲಾಗಲಿದೆ? ಎಂಬ ಸಮಸ್ಯೆ  ಕಗ್ಗಂಟಾಗಿ ಪರಿಣಮಿಸಿದೆ.

ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ ಮಗ ಅಖಿಲೇಶ್ ಸಿಂಗ್ ಯಾದವ್ ಹಾಗೂ ರಾಮ್ ಗೋಪಾಲ್ ಯಾದವ್‍ರನ್ನು ಪಕ್ಷದಿಂದ ಉಚ್ಛಾಟಿಸುವ ಅಪ್ಪ. ಅದಾದ ಒಂದೇ ದಿನಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ "ನೇತಾಜಿ", ಮುಲಾಯಂ ಸಿಂಗ್ ಯಾದವ್‍ರ ಒಪ್ಪಿಗೆಯಿಲ್ಲದೆ ರಾಷ್ಟ್ರೀಯ ಕಾರ್ಯಕಾರಣಿಯನ್ನು ಕರೆಯಲಾಗುತ್ತದೆ, ಅಲ್ಲಿ 224 ಜನಪ್ರತಿನಿಧಿಗಳ ಸಂಖ್ಯಾಬಲ ತನಗೇ ಇದೆಯೆಂದು ಅಖಿಲೇಶ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ. ಅಪ್ಪ ಮುಲಾಯಂರನ್ನು ಆ ಸ್ಥಾನದಿಂದ ವಜಾಗೊಳಿಸುತ್ತಾರೆ. ಇದು ಅಧಿಕಾರಕ್ಕಾಗಿ ತಂದೆಯನ್ನು ಸೆರೆಯಲ್ಲಿಟ್ಟು ಸೋದರರನ್ನು ಕೊಂದ ಔರಂಗಜೇಬನ ಇತಿಹಾಸದ ಕಥೆಯಲ್ಲ. ಹಿಂದಿಯಲ್ಲಿ ಪ್ರಕಾಶ್ ಝಾ ನಿರ್ದೇಶಿಸಿದ್ದ ರಾಜ್‍ನೀತಿ ಸಿನಿಮಾಕ್ಕಿಂತಲೂ ರೋಚಕವಾಗಿ ಕಣ್ಣೆದುರಿಗೆ ನಡೆಯುತ್ತಿರುವ ಉತ್ತರ ಪ್ರದೇಶದ ಕ್ಷಿಪ್ರ ಹಾಗೂ ಕೀಳು ರಾಜಕೀಯ ಬೆಳವಣಿಗೆಗಳ ಮೂರ್ತ ರೂಪ.

ಕಳೆದ ಒಂದು ವರ್ಷದಿಂದ ಅಧಿಕಾರಕ್ಕಾಗಿ ಶೀತಲವಾಗಿ ಒಳಗೊಳಗೆ ನಡೆಯುತ್ತಿರುವ ಅಪ್ಪ-ಮಗನ ನಡುವಿನ "ಯಾದವಿ" ಕಲಹ, ಕನಿಷ್ಟ ಪಕ್ಷದೊಳಗೇ ಬಗೆಹರಿಯಬೇಕಿದ್ದ ಮನೆಜಗಳ ಬೀದಿಗೆ ಬಂದು ಸಮಾಜವಾದಿ ಪಕ್ಷಕ್ಕೆ ಯಾರು ನಿಜವಾದ ನಾಯಕ? ಯಾರೊಂದಿಗೆ ಜನಪ್ರತಿನಿಧಿಗಳು ನಿಂತಿದ್ದಾರೆ? ಕೊನೆಗೆ ನೇತಾಜಿ ಎಂದು ಕರೆಸಿಕೊಳ್ಳುವ ಸಮಾಜವಾದಿ ಪಕ್ಷವನ್ನು ಕಟ್ಟಿ ಬೆಳೆಸಿದ 'ಹಳೆಯ ತಲೆ' ಮುಲಾಯಂ ಸಿಂಗ್ ಯಾದವ್ ಪಾಲಾಗುವುದೋ ಅಥವಾ ಅವರ ಮಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರಿಗೆ ಪಕ್ಷದ ಸೈಕಲ್ ಚಿಹ್ನೆ ದೊರೆಯಲಿದೆಯೊ? ಈ ಪ್ರಶ್ನೆಗಳ ಗೊಂದಲ ಇದೀಗ ಕೇಂದ್ರ ಚುನಾವಣಾ ಆಯೋಗದ ಅಂಗಣದಲ್ಲಿ ಬಂದು ನಿಂತಿದೆ. ಜನವರಿ 13ರಂದು ಚುನಾವಣಾ ಆಯೋಗ ಯಾವ ನಿರ್ಣಯ ಕೈಗೊಳ್ಳುತ್ತದೆಯೋ ಅದರ ಮೇಲೆ ಸಮಾಜವಾದಿ ಪಕ್ಷದ ಹಾಗೂ ಅಪ್ಪ ಮಗನ ಕಲಹದ ಭವಿಷ್ಯಕ್ಕೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಅಲ್ಲಿಯವರೆಗೂ ಎಲ್ಲವೂ ಅಸ್ಪಷ್ಟ, ಉತ್ತರಪ್ರದೇಶದ ಆಡಳಿತದಂತೆ ಅರಾಜಕ.

-ಚಿಹ್ನೆಯ ಸಮಸ್ಯೆಯನ್ನು ಕೇಂದ್ರ ಚುನಾವಣಾ ಆಯೋಗ ಹೇಗೆ ನಿರ್ವಹಿಸಲಿದೆ?.

ಭಾರತೀಯ ಚುನಾವಣಾ ಆಯೋಗದ ಮುಂದಿರುವ ಆಯ್ಕೆ:
ಸರಳವಾಗಿ ಹೇಳುವುದಾದರೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆಯಂತಹ ಮಹತ್ವದ ಚುನಾವಣೆಗಳನ್ನು ನಡೆಸುವ ಹೊಣೆಹೊತ್ತ ಕೇಂದ್ರ ಚುನಾವಣಾ ಆಯೋಗ, ಚುನಾವಣಾ ಆಯೋಗದಿಂದ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ತಮ್ಮ ಕಲಹಗಳನ್ನು ಆಂತರಿಕವಾಗಿಯೇ ಪರಿಹರಿಸಿಕೊಳ್ಳಲು ಅಥವಾ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಸೂಚಿಸುತ್ತದೆ. ಆದರೆ ಚುನಾವಣಾ ಆಯೋಗದ ಮಾನ್ಯತೆಯಿರುವ ರಾಜಕೀಯ ಪಕ್ಷದೊಳಗೆ ಅಧಿಕೃತ ಪಕ್ಷದ ಚಿಹ್ನೆಯನ್ನು "ಯಾವ ಬಣಕ್ಕೆ ನೀಡಬೇಕು ಅಥವಾ ಯಾರಿಗೂ ನೀಡಬಾರದು" ಎಂಬ ನಿರ್ಧಾರವನ್ನು ಚುನಾವಣಾ ಆಯೋಗವೇ ಮಾಡುತ್ತದೆ. 

ಚುನಾವಣಾ ಆಯೋಗದ ಅಧಿಕಾರ:
"ಚುನಾವಣಾ ಚಿಹ್ನೆಗಳು(ಮೀಸಲು ಹಾಗೂ ಹಂಚಿಕೆ)ಆದೇಶ, 1968"ರ ಅನ್ವಯ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳನ್ನು ಮಾನ್ಯಮಾಡುವ ಹಾಗೂ ಅವುಗಳಿಗೆ ಅಧಿಕೃತ ಚಿಹ್ನೆಯನ್ನು ನೀಡುವ ಅಧಿಕಾರವನ್ನು ನೀಡಲಾಗಿದೆ. ಈ ಆದೇಶದ 15ನೇ ಪ್ಯಾರಾ ಪ್ರಕಾರ ಚುನಾವಣಾ ಆಯೋಗದ ಮಾನ್ಯತೆಯಿರುವ ರಾಜಕೀಯ ಪಕ್ಷವೊಂದರ ವಿವಿಧ ಬಣ-ಗುಂಪುಗಳ ನಡುವೆ ಪಕ್ಷದ ಹೆಸರಿಗಾಗಿ ಅಥವಾ ಪಕ್ಷದ ಚಿಹ್ನೆಗಾಗಿ ನಡೆಯುವ ಕಿತ್ತಾಟದಲ್ಲಿ ಯಾರು ನಿಜವಾದ ಹಕ್ಕುದಾದರು ಎಂಬುದನ್ನು ನಿರ್ಧರಿಸುವ ಹಕ್ಕು ಕೇವಲ ಮತ್ತು ಕೇವಲ ಚುನಾವಣಾ ಆಯೋಗಕ್ಕಿದೆ. ಬೇರೆ ಯಾರಿಗೂ ಈ ಅಧಿಕಾರವನ್ನು ನೀಡಲಾಗಿಲ್ಲ.

ತೀರ್ಪಿನ ಪ್ರಕ್ರಿಯೆ:
ಈ ನಿರ್ಣಯಕ್ಕಾಗಿ ಚುನಾವಣಾ ಆಯೋಗ ಮೊದಲು ಚುನಾವಣಾ ವಿಚಾರಣಾ ಸಮಿತಿಯನ್ನು ರೂಪಿಸಿ ಪಕ್ಷದ ಚಿಹ್ನೆಗಾಗಿ (ಅಥವಾ ಹೆಸರಿಗಾಗಿ) ಕಾದಾಡುತ್ತಿರುವ ಬಣಗಳು ಸಲ್ಲಿಸಿರುವ ವಾದ-ಪ್ರತಿವಾದಗಳನ್ನು ಅಧ್ಯಯನಿಸುತ್ತದೆ. ಪಕ್ಷ ರೂಪುಗೊಂಡ ಬಗೆ, ಸಾಂಸ್ಥಿಕ ಸ್ವರೂಪ, ಪಕ್ಷ ಒಟ್ಟಾಗಿದ್ದಾಗ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಗುಂಪು, ವಿವಿಧ ಸಮಿತಿಗಳು ಇತ್ಯಾದಿಗಳ ಕೂಲಂಕುಶ ಅಧ್ಯಯನ ನಡೆಸುತ್ತದೆ. ಅಲ್ಲಿನ ಪ್ರತಿನಿಧಿಗಳು ಯಾರನ್ನು ತಮ್ಮ ನಾಯಕರನ್ನಾಗಿ ಸಮರ್ಥಿಸುತ್ತಾರೆ ಎಂಬುದನ್ನು ಪರಿಗಣಿಸುತ್ತದೆ. ನಂತರ "ಬಹುಮತ" ಇರುವ ಅಂದರೆ ಸಂಘಟನೆಯ ಸಾಂಸ್ಥಿಕ ಬೆಂಬಲ ಹಾಗೂ ಚುನಾಯಿತ ಪ್ರತಿನಿಧಿಗಳ ಬೆಂಬಲ ಯಾರಿಗೆ ಹೆಚ್ಚಿದೆಯೋ ಅವರಿಗೆ ಪಕ್ಷದ ಅಧಿಕೃತ ಚಿಹ್ನೆಯನ್ನು ನೀಡಲಾಗುತ್ತದೆ. ಅಥವಾ ಗೊಂದಲ ಮುಂದುವರೆದರೆ ಚುನಾವಣಾ ಆಯೋಗ ಚಿಹ್ನೆಯನ್ನು ಯಾರಿಗೂ ನೀಡದೆಯೂ ಇರಬಹುದು. ಚುನಾವಣಾ ಆಯೋಗ ಒಮ್ಮೆ ನೀಡುವ ನಿರ್ಣಯವನ್ನು ಎರಡೂ ಬಣಗಳು ಒಪ್ಪಲೇಬೆಕು. ಅದನ್ನು ಮೇಲ್ಮನವಿಯ ಮೂಲಕ ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ.

ಬಹುಮತ ಯಾರಿಗೋ ಅವರಿಗೇ ಪಕ್ಷದ ಚಿಹ್ನೆ:
ಚುನಾವಣಾ ಆಯೋಗದ ತನಿಖೆಯಲ್ಲಿ ಬಹುಮತ ಯಾವ ಬಣದತ್ತ ಅಥವಾ ಯಾರ ಕಡೆಗಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗದಿದ್ದರೆ ಅಥವಾ ಎರಡು ಗುಂಪಿನತ್ತಲೂ ಸಮಾನ ಬೆಂಬಲ ವ್ಯಕ್ತವಾಗಿದ್ದರೆ ಆಗ ಮೂಲ ಪ್ರಶ್ನೆ ಹಾಗೆಯೇ ಉಳಿದುಕೊಳ್ಳುತ್ತದೆ. ಅಂತಹ ಸಂಕೀರ್ಣ ಸಂದರ್ಭಗಳಲ್ಲಿ ಚುನಾವಣಾ ಆಯೋಗ ಗಟ್ಟಿ ನಿರ್ಧಾರಕ್ಕೆ ಬರಬೇಕಾಗುತ್ತದೆ. ಆಯೋಗಕ್ಕೆ ಕೂಲಕುಂಶ ಅಧ್ಯಯನ ಹಾಗೂ ತನಿಖೆಗಾಗಿ ಸಮಂiÀi ಬೇಕಿರುವುದರಿಂದ ಚುನಾವಣೆಯ ಈ ಹೊತ್ತಿನಲ್ಲಿ ತಾತ್ಕಾಲಿಕವಾಗಿ ಪಕ್ಷದ ಹಳೆಯ ಚಿಹ್ನೆಯನ್ನು ಅಸಿಂಧುಗೊಳಿಸಿ ಎರಡೂ ಬಣಗಳಿಗೂ ಹೊಸತಾದ ಪ್ರತ್ಯೇಕ ಹೆಸರಿನ ಹಾಗೂ ಪ್ರತ್ಯೇಕ ಚಿಹ್ನೆಗಳ ಅಡಿಯಲ್ಲಿ ಚುನಾವಣೆಯನ್ನು ಸ್ಪರ್ಧಿಸಲು ಆದೇಶಿಸಬಹುದು. ಅಥವಾ ಈಗಿರುವ ಹೆಸರಿನ ಹಿಂದೆ ಅಥವಾ ಮುಂದೆ ಹೆಚ್ಚುವರಿ ಪದಪುಂಜವನ್ನು ಸೇರಿಸಿಕೊಂಡು ಚುನಾವಣೆಯನ್ನು ಸ್ಪರ್ಧಿಸಲು ತಿಳಿಸಬಹುದು. ಉದಾಹರಣೆಗೆ: ಕಾಂಗ್ರೆಸ್(ಜೆ), ಕಾಂಗ್ರೆಸ್(ಒ) ಜನತಾದಳ(ಜಾತ್ಯಾತೀತ) ಇತ್ಯಾದಿ.

ಭಾರತದ ಇತಿಹಾಸದಲ್ಲಿ ಪ್ರಮುಖ ಆಂತರಿಕ ಪಕ್ಷ ಕಲಹ:
1964ರ ಡಿಸೆಂಬರ್‍ನಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷ ಚುನಾವಣಾ ಆಯೋಗಕ್ಕೆ ತೆರಳಿ ತಮ್ಮನ್ನು ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾಕ್ರ್ಸಿಸ್ಟ್) ಎಂಬ ಪ್ರತ್ಯೇಕ ಹೆಸರಿನಿಂದ ಮಾನ್ಯಮಾಡಬೇಕೆಂದು ಕೇಳಿಕೊಂಡಿತು. 1951ರ ಪ್ರಜಾಪ್ರತಿನಿಧಿ ಕಾಯ್ದೆಯ "ಚುನಾವಣಾ ಚಿಹ್ನೆಗಳು(ಮೀಸಲು ಹಾಗೂ ಹಂಚಿಕೆ)ಆದೇಶ, 1968"ರ ಆದೇಶ ಜಾರಿಯಾಗಿರದಿದ್ದ ಕಾರಣ ಆಂದ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳ ಈ ಮೂರು ರಾಜ್ಯಗಳಲ್ಲಿ 4% ಮತ ಪ್ರಮಾಣವಿರುವ ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾಕ್ರ್ಸಿಸ್ಟ್) ಪ್ರತ್ಯೇಕ ಪಕ್ಷವಾಗಿ ಮಾನ್ಯಗೊಳಿಸಿತು. 1968ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ವಿ.ವಿ.ಗಿರಿಯವರನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿಯವರು "ಆತ್ಮಸಾಕ್ಷಿ"ಯ ಆಧಾರದಲ್ಲಿ ಕಾಂಗ್ರೆಸ್‍ನ ವಿಪ್ ನಿರಾಕರಿಸುವಂತೆ ಕರೆ ನೀಡಿದ್ದರು. ಆಗ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ ಇಂದಿರಾಗಾಂಧಿಯವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು. ಆ ಹೊತ್ತಿಗೆ "ಹಳೆ" ಕಾಂಗ್ರೆಸ್(ಒ) ಹಾಗೂ ಇಂದಿರಾ ನೇತೃತ್ವದ "ಹೊಸ" ಕಾಂಗ್ರೆಸ್(ಜೆ) ಎಂಬುದಾಗಿ ವಿಭಜನೆಗೊಂಡಿತ್ತು. 1987ರಲ್ಲಿ ಎಂ.ಜಿ.ರಾಮಚಂದ್ರನ್ ವಿಧಿವಶರಾದಾಗ ಎಐಡಿಎಂಕೆಯಲ್ಲಿಯೂ ಜಯಲಲಿತಾ ಹಾಗೂ ಜಾನಕಿ ಬಣಗಳ ನಡುವೆ ಜಗಳ ಏರ್ಪಟ್ಟಿತ್ತು. ಚುನಾವಣಾ ಆಯೋಗ ಮಧ್ಯಪ್ರವೇಶಿಸುವ ಮುನ್ನವೇ ಆಂತರಿಕವಾಗಿ ಸಮಸ್ಯೆ ಬಗೆಹರಿದಿತ್ತು. ಇವುಗಳ ನಂತರ ಈಗ ಸಮಾಜವಾದಿ ಪಕ್ಷದೊಳಗಿನ ಜಗಳ ಚುನಾವಣಾ ಆಯೋಗದ ಮೆಟ್ಟಿಲೇರಿದೆ.

ಏನಾಗಲಿದೆ?:
ಚುನಾವಣಾ ಆಯೋಗ ಚುನಾವಣಾ ಚಿಹ್ನೆಯ ಸಮಸ್ಯೆಯ ಗೊಂದಲ ಪರಿಹಾರಕ್ಕಾಗಿ ಜನವರಿ 13ರಂದು ಸಭೆ ಸೇರಲಿದೆ. ಜನವರಿ 17ರಂದು ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ಹಾಗಾಗಿ ಅಷ್ಟರೊಳಗೆ ನಿರ್ಣಯ ತೆಗೆದುಕೊಳ್ಳುವಂತೆ ಸಮಾಜವಾದಿ ಪಕ್ಷ ಚುನಾವಣಾ ಆಯೋಗವನ್ನು ಬೇಡುತ್ತಿದೆ. ಸಧ್ಯದ ಪರಿಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಬಣಗಳು ಸಂಧಾನವಾಗದ ಹೊರತು ಒಂದೇ ದಿನದಲ್ಲಿ ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೆ ಚುನಾವಣಾ ಆಯೋಗಕ್ಕೆ ಸಾಧ್ಯವಾಗದು. ಆದ್ದರಿಂದ ತಾತ್ಕಾಲಿಕವಾಗಿ ಹೆಸರು ಹಾಗೂ ಚಿಹ್ನೆಯನ್ನು ಅಸಿಂಧುಗೊಳಿಸಿ ಹೊಸ ಚಿಹ್ನೆ ಮತ್ತು ಹೆಸರಿನೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಎರಡೂ ಬಣಗಳಿಗೂ ತಿಳಿಸಬಹುದು.

ಮತ್ತೆ ಒಂದಾದರೆ:
ಹೀಗೆ ವಿಮುಖವಾಗಿರುವ ಎರಡು ಬಣಗಳು ಎರಡು ಪಕ್ಷಗಳಾಗಿ ಚುನಾವಣೆಯನ್ನು ಎದುರಿಸಿ ಸೋಲುವಂತಾದರೆ; ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಗದಿದ್ದರೆ ಅಂದರೆ ಕೆಟ್ಟು ಬುದ್ಧಿಬಂದರೆ ಅಥವಾ ಕೆಡುವ ಮುನ್ನವೇ ಬುದ್ಧಿ ಬಂದು ಪ್ರತ್ಯೇಕತೆಯ ಮಿತಿಯರಿತು ಮೊದಲೇ ಅರಿತು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಎರಡೂ ಬಣಗಳು ಒಂದಾಗಿ ಏಕೀಕೃತ ಮಾತೃ ಪಕ್ಷವಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ವಿನಂತಿ ಸಲ್ಲಿಸಿದರೆ ಆಗ ಮತ್ತೆ ಮೊದಲಿನಂತೆಯೇ ಪಕ್ಷದ ಮೂಲ ಹೆಸರು ಹಾಗೂ ಚಿಹ್ನೆ ಪಕ್ಷಕ್ಕೆ ದೊರೆಯುವ ಸಾಧ್ಯತೆಯಿದೆ.
--
ಪಕ್ಷದ ಚುನಾವಣಾ ಚಿಹ್ನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ವಿರೋಧಿ ಬಣವನ್ನು ಮೂಲೆಗುಂಪಾಗಿಸುವುದು ಎರಡೂ ಬಣಗಳ ಆಲೋಚನೆ. ಪಕ್ಷದ ಅಧಿಕೃತ ಚಿಹ್ನೆ ತಮ್ಮದೆಂದು ವಾದಿಸುತ್ತಿರುವವರ ಮುಂದೆ ಜಗಳಕ್ಕೆ ಸಮಯವಿಲ್ಲ, ಚಿಹ್ನೆ ಪಡೆಯುವ ಪ್ರಯತ್ನದಲ್ಲಿ ಸೋತವರಿಗೆ ಈ ಹೊತ್ತಿನಲ್ಲಿ ಹೊಸ ಪಕ್ಷವನ್ನು ಸ್ಥಾಪಿಸಿ ಸಂಘಟಿಸುವುದು ಅಸಾಧ್ಯದ ಮಾತು. ಯಾಕೆಂದರೆ ಚುನಾವಣೆ ತಲೆ ಮೇಲೆ ಬಂದು ಕುಳಿತಿದೆ. ಹಾಗಾಗಿ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ತಮ್ಮ ನಾಯಕತ್ವವನ್ನು ಸಾಬೀತುಪಡಿಸಬೇಕಿರುವುದು ಅಪ್ಪ-ಮಗನ ಮುಂದಿರುವ ಸಮಾನ ಸವಾಲು. ಅಖಿಲೇಶ್ ಸೋತರೆ ಭವಿಷ್ಯದಲ್ಲಿ ಹೊಸ ಪಕ್ಷ ರೂಪುಗೊಳ್ಳುವುದಂತು ಸತ್ಯ. ಮುಲಾಯಂ ಸೋತರೆ ಅದು ತಮ್ಮ ತಲೆಮಾರಿನ, ಸಮಾಜವಾದಿ ರಾಜಕಾರಣ ಹಾಗೂ ಪಕ್ಷದಲ್ಲಿನ ಮನ್ವಂತರಕ್ಕೆ ವೇದಿಕೆಯಾಗಲಿದೆ.

ಅಪ್ಪ-ಮಗನಲ್ಲಿ ಯಾರೇ ಗೆದ್ದರೂ  ಸಮಾಜವಾದಿ ಪಕ್ಷದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಈ ಮಧ್ಯೆ ಯಾವುದೇ ದಾರಿ ಕಾಣದೆ ಚುನಾವಣೆಗಾಗಿಯೇ ಸಧ್ಯಕ್ಕೆ ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ನಡೆದರೂ ಒಂದಲ್ಲ ಒಂದು ದಿನ ಬೇಗುದಿಯಂತಿರುವ ಜ್ವಾಲಾಮುಖಿ ಸ್ಫೋಟಗೊಳ್ಳುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಅಪ್ಪ-ಮಗನ ಮಧ್ಯೆ ಸಾಕಷ್ಟು ಜನ ಹಾಗೂ ಸಂಗತಿಗಳು ಕಾರ್ಯಪ್ರವೃತ್ತರಾಗಿವೆ. ಇದು ಹೇಗೆಂದರೆ ಕರ್ನಾಟಕದ ಜೆಡಿಎಸ್‍ನಲ್ಲಿ ದೇವೇಗೌಡರು ತಮ್ಮ ಮಗ ಕುಮಾರಸ್ವಾಮಿಯ ತಲೆಯನ್ನು ಕೆಲವು ಶಾಸಕರು ಕೆಡಿಸುತ್ತಿದ್ದಾರೆ ಎಂದು ಅವರನ್ನು ಪಕ್ಷದಿಂದ ದೂರವಿಟ್ಟಿದ್ದಾರಲ್ಲ ಹಾಗೆ. ಇಲ್ಲಿ ರಾಮ್‍ಗೋಪಾಲ್ ಯಾದವ್ ಅಖಿಲೇಶ್ ಹಿಂದೆ ನಿಂತಿದ್ದರೆ ಅಮರ್‍ಸಿಂಗ್ ಶಿವಪಾಲ್ ಯಾದವ್ ಮುಲಾಯಂ ಸಿಂಗ್ ಜೊತೆಗೆ ನಿಂತಿದ್ದಾರೆ. ಪ್ರಾಯಶಃ ಮುಲಾಯಂ ಕುಟುಂಬದ ಇದೇ ಸದಸ್ಯರು ಅಪ್ಪ-ಮಗನ ನಡುವೆ ಗೋಡೆಯಾಗಿರುವುದು. 

ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಅಖಿಲೇಶ್ ಯಾದವ್ ಸರಕಾರಕ್ಕೆ, ಚುನಾವಣೆಯ ಹೊಸ್ತಿಲಿನಲ್ಲಿ ಜನರನ್ನು ಹೊಸ ಹೊಸ ಗೊಂದಲಗಳಿಗೆ ದೂಡುತ್ತಿದೆ. ತನ್ನ ಉಚ್ಛಾಟನೆಯನ್ನೇ ರಾಜಕೀಯ ವರ್ಚಸ್ಸಿನ ದಾಳವಾಗಿಸಿಕೊಂಡು ಜನರ ಭಾವನೆ, ಮರುಕ ಹಾಗೂ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ತಮ್ಮ ಕಳಪೆ ಆಡಳಿತ, ಮುಳುಗಿದ ಭರವಸೆಗಳು ಹಾಗೂ ಮಿತಿಗಳನ್ನು ಜನರ ಮನಸ್ಸಿನಿಂದ ತೆಗೆದುಹಾಕಲು ಬಯಸುತ್ತಿರುವ ಮಗನ ಆಸ್ಥೆಯಿಂದ ಅಪ್ಪನೂ ಸೋಲುತ್ತಿದ್ದಾನೆ. ಪಕ್ಷವೂ ಕಳೆಗಟ್ಟುತ್ತಿದೆ. ಕೆಲವು ವರ್ಷಗಳ ಸಮಕಾಲೀನ ಚರಿತ್ರೆಯೇ ವಿವರಿಸುತ್ತಿರುವಂತೆ ಸಮಾಜವಾದಿ ಪಕ್ಷದಲ್ಲಿ ಅನಿರೀಕ್ಷಿತ ಸಂಗತಿಗಳೇ ಹೊಸ ನಿರೀಕ್ಷೆಗಳಾಗುತ್ತಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಚುನಾವಣೆಯ ಹೊಸ್ತಿಲಲ್ಲಿ ಮತ್ತು ರಾಜಕೀಯ ಪಡಸಾಲೆಯಲ್ಲಿ ಸಮಾಜವಾದಿ ಪಕ್ಷದಲ್ಲಿ ಅನಿಚ್ಛಿತತೆ, ನಾಟಕೀಯತೆ ಹಾಗೂ ನಿರುತ್ತರತೆ ಎಂಬುದು ಅನಾಯಾಸ ರಾಜಕೀಯ ಪರಂಪರೆಯಾಗಿ ಮುಂದುವರೆಯುತ್ತಿದೆ.

ಶ್ರೇಯಾಂಕ ಎಸ್ ರಾನಡೆ.

No comments:

Post a Comment